ಮೈಸೂರು: ಕಲೆ ಎಂಬುದು ಮನುಷ್ಯರಲ್ಲಿ ಇರುವಂತಹ ಒಂದು ಮೌಲ್ಯತವಾದ ಅಂಶ. ಅಂತಹ ಬೆಲೆ ಕಟ್ಟಲಾಗದ ಕಲೆಗೆ ಕಾವಾ ಕಾಲೇಜು ಪ್ರಸಿದ್ದಿಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಇಂದು ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ, “ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರದಲ್ಲಿ ರಚಿಸಲಾದ ಕಲಾ ಕೃತಿಗಳ ಪ್ರದರ್ಶನ, ಲಲಿತ ಕಲೆ, ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ಮತ್ತು ರಾಷ್ಟ್ರಮಟ್ಟದ ಕರಕುಶಲ ಕಲೆಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡದ ಅವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲೆಗಳಿಗೆ ಕಲಾವಿದರಿಗೆ ಕೊರತೆಯೇ ಇಲ್ಲ. ಅದನ್ನು ಮತ್ತಷ್ಟು ಹೆಚ್ಚಿಸಲು ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಇದರಿಂದಾಗಿ ಹಲವು ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ವಿವಿಧ ಕಲೆಗಳ ಬಗ್ಗೆ ತಿಳಿಯುವಂತೆ ಮಾಡಲಾಗುತ್ತದೆ ಎಂದರು.
ಮೈಸೂರು ದಸರಾ ಎಂಬುದು ಬಹಳಷ್ಟು ವಿಶೇಷವಾದ ದಸರಾ. ಇಲ್ಲಿನ ರಾಜರು ಸಂಸ್ಕೃತಿಕ, ರಂಗಾಯಣ, ನಾಟಕ, ಲಲಿತ ಕಲೆ, ಕರಕುಶಲ ಕಲೆ ಸೇರಿದಂತೆ ಇನ್ನಿತರ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸರ್ಕಾರ ಕಲೆಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮೈಸೂರಿನ ರಾಜ ಮನೆತನಗಳಿಂದ ಸತತವಾಗಿ ಆಚರಿಸಿಕೊಂಡು ಬಂದಂತಹ ಮೈಸೂರು ದಸರಾ ಇಂದು ನಾಡಹಬ್ಬವಾಗಿ ವಿಶ್ವ ವಿಖ್ಯಾತಿ ಪಡೆದಿದೆ. ದಸರಾ ಕೇವಲ ಮನರಂಜನೆ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾಗದೆ ಕಲೆಗಳಿಗೆ, ಗಾಯಕರಿಗೆ, ನಾಟಕಗಾರರು ಸೇರಿದಂತೆ ಹಲವಾರು ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡುತ್ತದೆ ಎಂದು ಹೇಳಿದರು.
ಬೆಂಗಳೂರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ಎಂ.ಸಿ ರಮೇಶ್ ರವರು ಮಾತನಾಡಿ, ಹಿರಿಯರು ಬಿಟ್ಟು ಹೋಗಿರುವಂತಹ ಕಲೆಗಳು, ದೇವಸ್ಥಾನಗಳು, ವಾಸ್ತು ಶಿಲ್ಪಗಳನ್ನು ನಾವು ಎಷ್ಟು ಸ್ಮರಿಸಿದರೂ ಸಾಧ್ಯವಾಗುವುದಿಲ್ಲ. ವಾಸ್ತುಶಿಲ್ಪ ಕಲೆಯಲ್ಲಿ ನೋಡುವುದಾದರೆ ಮಣಿಪುರ, ಖಡ್ಗ, ಅಶೋಕ ಚಕ್ರ, ಸಹಸ್ರಾರು ಚಕ್ರ ಎಲ್ಲವನ್ನು ಗರ್ಭಗುಡಿಯಲ್ಲಿ ಹುಟ್ಟಿಕೊಂಡಿದ್ದವು, ನಮ್ಮ ದೇಶಕ್ಕೆ ಹೋಲಿಕೆ ಆಗುವಂತಹ ವಾಸ್ತುಶಿಲ್ಪವನ್ನು ನಮ್ಮ ಹಿರಿಯರು ನಮಗೆ ಕೊಟ್ಟಿದ್ದಾರೆ ಅದನ್ನು ನಾವು ಮರೆಯುತ್ತಿದ್ದೇವೆ ಎಂದು ಹೇಳಿದರು.
ನಮಗೆಂದೆ ನಮ್ಮ ಹಿರಿಯರು ಹಲವಾರು ಭಾಷೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಈಗ ಕೇವಲ ಬೆರಳೆಣಿಕೆಯಷ್ಟು ಭಾಷೆಗಳು ಮಾತ್ರ ನಮ್ಮಲ್ಲಿ ಹುಳಿದಿದೆ. ಪ್ರಸ್ತುತ ಸಂಸ್ಕೃತ ಭಾಷೆಯನ್ನು ಬಳಸುವುದು ಕಡಿಮೆಯಾಗಿದ್ದು, ನಮ್ಮ ಕನ್ನಡ ಸಂಸ್ಕೃತ ಭಾಷೆಯನ್ನು ನಾವು ಹೆಚ್ಚಾಗಿ ಬಳಸಬೇಕು ಹಾಗೂ ಬೆಳೆಸಬೇಕು ಎಂದು ಹೇಳಿದರು.
ಪಾಶ್ಚತ್ಯ ಧರ್ಮ ವಿದ್ಯೆಯನ್ನು ಪೂರ್ತಿಯಾಗಿ ಬಳಸುವುದು ಕಡಿಮೆ ಆಗಿದೆ. ಅದಕ್ಕೆ ನಾವು ಕೊಟ್ಟಿರುವ ಕೊಡುಗೆ ಬಹಳ ಇದೆ. ಆದರೆ ನಾವಿಂದು ಬೇರೆ ವಿದ್ಯೆಗೆ ಮಾರಿಹೋಗುತ್ತಿದ್ದೇವೆ. ಆದ್ದರಿಂದ ನಮ್ಮಲ್ಲಿ ಚಿಂತನೆಗಳು ಬದಲಾದರೆ ಹೊಸತನ ಎಂಬುದು ಸಾಧ್ಯ ಎಂದರು.
ಪ್ರತಿಯೊಬ್ಬ ಕಲೆಗಾರನು ಪ್ರಶ್ನೆ ಮಾಡುವುದನ್ನು ಹಾಗೂ ಚಿಂತನೆ ಮಾಡುವುದನ್ನು ಕಲಿಯಬೇಕು ಹಾಗಾದರೆ ಮಾತ್ರ ಉತ್ತಮ ಕಲೆಗಾರನಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ದಾನಯ್ಯ ಎಸ್ ಚೌಕಿಮಠ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಿರೀಶ್, ವಿಜಯಪುರ ಜಿಲ್ಲೆಯ ಮಹಾಂತೇಶ್ ಎಂ ಪಲದಿನ್ನಿ ಹಾಗೂ ಪ್ರಮೋದ್ ಆಚಾರ್, ಉಡುಪಿ ಜಿಲ್ಲೆಯ ನರೇಶ್ ನಾಯ್ಡು, ಮೈಸೂರು ಜಿಲ್ಲೆಯ ಬಸವರಾಜು ಎಲ್, ಚಿಕ್ಕಮಗಳೂರು ಜಿಲ್ಲೆಯ ಸುಕೇಶ್ ಬಿ ಸಿ, ಯಾದಗಿರಿ ಜಿಲ್ಲೆಯ ಪ್ರಶಾಂತ್ ಕುಮಾರ್ ಜಿ, ಬೆಂಗಳೂರಿನ ಜ್ಯೋತಿ ಭಾರತಿ ವಿ, ಟಿ ನರಸೀಪುರ ತಾಲೂಕಿನ ಸಂಗೀತ ಕೆ, ಬೆಂಗಳೂರಿನ ನಾಗಪ್ಪ ಪ್ರಧಾನಿ ರಾಮನಗರ ಜಿಲ್ಲೆಯ ಶಿವಪ್ರಸಾದ್ ಎಸ್, ಮೈಸೂರಿನ ಟೀ ಜಯದೇವಣ್ಣ ಧಾರವಾಡದ ಡಿ ಎಂ ಬಡಿಗೇರ, ರಾಯಚೂರಿನ ವಾಜಿದ್ ಸಾಜಿದ್, , ಹಾಸನದ ಶಂಕ್ರಪ್ಪ, ಕೊಪ್ಪಳದ ಕೇ ಗಂಗಾಧರ ತುಮಕೂರಿನ ಅಶೋಕಲ್ಪ ಶೆಟ್ಟಿ, ಬೆಂಗಳೂರಿನ ಹರಿಪ್ರಸಾದ್ , ಶಿರಸಿಯ ಗಣೇಶ್ ಧಾರೇಶ್ವರ್ ಹಾಗೂ ಚಿಕ್ಕಮಗಳೂರಿನ ಲಕ್ಷ್ಮಿ ಮೈಸೂರು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯ ಉಪ ವಿಶೇಷ ಅಧಿಕಾರಿಗಳಾದ ಶ್ರೀ ದೇವರಾಜು ಎ, ಮಾನವ ಸಂಗ್ರಹಾಲಯದ ನಿರ್ದೇಶಕರಾದ ಅಮಿತ್ ಪಾಂಡೆ, ಘನ ಮತ್ತು ಸಂಸ್ಕೃತಿ ಇಲಾಖೆಯ ಧರಣಿ ದೇವಿ ಮಾಲಗತ್ತಿ, ಹಿರಿಯ ಕಲಾವಿದರಾದ ಡಾಕ್ಟರ್ ಎಚ್ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ. ಸುದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.