ಮನೆ ಸ್ಥಳೀಯ ಕೃತಕ ಬುದ್ದಿಮತ್ತೆ, ಮೊಬೈಲ್ ಆಕ್ರಮಿತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಕುಂಠಿತಗೊಳ್ಳುತ್ತಿದೆ: ಪ್ರೊ. ಶರಣಪ್ಪ...

ಕೃತಕ ಬುದ್ದಿಮತ್ತೆ, ಮೊಬೈಲ್ ಆಕ್ರಮಿತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಕುಂಠಿತಗೊಳ್ಳುತ್ತಿದೆ: ಪ್ರೊ. ಶರಣಪ್ಪ ವಿ ಹಲ್ಸೆ

0

ಮೈಸೂರು: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಸರಿಯಾದ ದಾರಿಯನ್ನು ಆರಿಸಲು ಸಾಧ್ಯವಾಗದೆ ಗೊಂದಲಕ್ಕೀಡಾಗಿ ಕೃತಕ ಬುದ್ದಿಮತ್ತೆ ಹಾಗೂ ಮೊಬೈಲ್ಗೆ ಮಾರುಹೋಗಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಕುಂಠಿತಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಶರಣಪ್ಪ ವಿ ಹಲ್ಸೆ ಅವರು ಹೇಳಿದರು.

Join Our Whatsapp Group

ಇಂದು ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ ನವದೆಹಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆರ್ಟ್ ಅಂಡ್ ಮೈಂಡ್ ಫೆಸ್ಟ್ 2K24 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಮಾಜವನ್ನು ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕಿಂಗ್ ಮೇಕರ್ ಆಗಿ ಮಾಡಿದಾಗ ಸಮಾಜವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾನೆ. ಆದ್ದರಿಂದ ನಿಮ್ಮ ತಂದೆ-ತಾಯಿ ಗುರು ಹಿರಿಯರು ಹಾಗೂ ಸಮಾಜವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಇಂತಹ ಕಾರ್ಯಕ್ರಮದಲ್ಲಿ ಹಲವಾರು ಪರಿಣಿತರು ಹಾಗೂ ತಜ್ಞರು ಮಾತನಾಡಿದಾಗ ಅದನ್ನು ವಿದ್ಯಾರ್ಥಿಗಳು ಕೂಲಂಕುಷವಾಗಿ ಗ್ರಹಿಸಿ ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು ಅದರಿಂದ ನಿಮ್ಮ ಅರಿವೇ ನಿಮ್ಮ ಗುರುವು ಎಂದು ಬಸವಣ್ಣನವರ ತತ್ವವನ್ನು ಸ್ಮರಿಸಿದರು.

ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬೇಕು ಎಲ್ಲವನ್ನು ಗ್ರಹಿಸಿಕೊಂಡು ನಿಮ್ಮ ಗುರಿಯನ್ನು ತಲುಪಬೇಕು ನಿಮ್ಮ ನೈತಿಕತೆಯನ್ನು ಇಂದಿಗೂ ಬಿಡಬಾರದು ಈ ದೇಶದಲ್ಲಿ ಅನೇಕ ಮಹನೀಯರ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ಆಶಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ಅವರು, ಅಕ್ಷರದ ಜೊತೆಗೆ ಇವತ್ತಿನ ಯುವ ಸಮೂಹಕ್ಕೆ ಕೌಶಲ್ಯ ಹಾಗೂ ಪರಿಣಿತಿ ಇರಬೇಕು ಆಗ ಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತೆ ಎಂದರು.

ಕಾಲಮಾನಗಳಿಗೆ ಅನುಗುಣವಾಗಿ ಜಗತ್ತು ಕ್ಷಣ ಕ್ಷಣಕ್ಕೂ ವೇಗವಾಗಿ ಬದಲಾವಣೆಯಾಗುತ್ತಿದೆ. ಇದೇ ರೀತಿಯಲ್ಲಿ ಮಾನವನ ವಿಕಾಸ ಹಾಗೂ ಪ್ರಜ್ಞೆಯಲ್ಲಿ ಸಹ ಸಾಕಷ್ಟು ಬದಲಾವಣೆಗಳು ಕಾಣಬಹುದಾಗಿದೆ. 5 ರಿಂದ 10 ವರ್ಷದ ಮಕ್ಕಳು, 25 ರಿಂದ 30 ವರ್ಷದ ಮಕ್ಕಳಂತೆ ಯೋಚಿಸುವುದು, ವರ್ತಿಸುವುದು ಹಾಗೂ ಮಾತನಾಡುವುದನ್ನು ನಾವು ಕಾಣಬಹುದು ಎಂದರು.

25 ವರ್ಷಗಳ ಹಿಂದೆ ಒಂದು ಕಾಲವಿತ್ತು, ಆಗ ಶಿಕ್ಷಣಕ್ಕೆ ಇದ್ದಂತಹ ಮಹತ್ವ ಬೇರೆಯಾದಾಗಿತ್ತು. ಕೇವಲ ವ್ಯಕ್ತಿಗೆ ಓದಲಿಕ್ಕೆ ಮತ್ತು ಬರಿಯಲಿಕ್ಕೆ ಬಂದರೆ ಅವನಿಗೆ ಬೌದ್ದಿಕತೆಯ ವಿಕಾಸ ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ನಾವು ಸ್ಪರ್ಧಾತ್ಮಕ ಹಾಗೂ ಡಿಜಿಟಲ್ ಯುಗದಲ್ಲಿ ಜಗತ್ತಿನ ಸವಾಲುಗಳನ್ನು ಎದುರಿಸಲಿಕ್ಕೆ ಸಾಧ್ಯವಿದೆಯೇ, ಬದುಕು ಕಟ್ಟಿಕೊಳ್ಳಲು ಸಾಧ್ಯ ಇದ್ದಿಯಾ ಎಂಬ ಪ್ರಶ್ನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲಾ ರಂಗಗಳಲ್ಲೂ ಕೃತಕ ಬುದ್ದಿಮತ್ತೆಯು (ಎ.ಐ) ಈಗ ಅತಿಕ್ರಮಿಸಿದೆ. ನಿಮ್ಮ ಆಲೋಚನಾ ಶಕ್ತಿಗಳಿಗೆ ಅದು ವೈರಸ್ ಆಗಿ ಪರಿಣಮಿಸಿದೆ. ಜಗತ್ತು ತಲೆ ಎತ್ತಿ ನೋಡಬೇಕಾದ ಇಂತಹ ಸಂದರ್ಭದಲ್ಲಿ ಮೊಬೈಲ್ ನಮ್ಮ ತಲೆತಗ್ಗಿಸುತ್ತಿದೆ. ಗ್ಲೋಬಲ್ ಆಗಿ ಬೆಳೆಯಬೇಕಾದ ನಾವು ಗೂಗಲ್ ಗೆ ಸೀಮಿತಗೊಂಡಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಜಗತ್ತು ನಿಂತಿರುವುದು ಕಲೆ ಮತ್ತು ನಮ್ಮ ಮನಸ್ಸಿನ ಮೇಲೆ ಅದರಿಂದ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ನಿಮ್ಮ ಸ್ವ ಕೌಶಲ್ಯವನ್ನು ಈ ಸ್ಪರ್ಧೆಗಳಲ್ಲಿ ಅನಾವರಣಗೊಳಿಸಬಹುದು. ಅದರಿಂದ ಪ್ರಪಂಚದ ಎಲ್ಲಾ ಜ್ಞಾನವನ್ನು ಬೆಳೆಸಿಕೊಂಡು ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಡೀನ್ ಆದ ಡಾ. ಲಕ್ಷ್ಮಿ.ಎನ್ ಅವರು ಮಾತನಾಡಿ, ತಂತ್ರಜ್ಞಾನ ಮುಂದುವರೆದoತೆ ದೇಶದಲ್ಲಿ ಜಾಗತೀಕರಣ, ತಂತ್ರಜ್ಞಾನದ ಬದಲಾವಣೆಯ ಜೊತೆಗೆ ಡಿಜಿಟಲಿಕಾರಣವಾಗುತ್ತಿದ್ದು, ಇದರೊಟ್ಟಿಗೆ ಶಿಕ್ಷಣವು ಕೂಡಾ ಅತೀ ವೇಗವಾಗಿ ಮುಂದುವರಿಯುತ್ತಿವುದನ್ನು ನಾವು ಇಂದು ನೋಡಬಹುದು ಎಂದು ಹೇಳಿದರು.

ಪ್ರಾಚೀನ ಕಾಲಘಟ್ಟದಲ್ಲಿ ಕೇವಲ ಹಳೇ ಕಾಲದ ಸಾಂಪ್ರದಾಯಿಕ ಆಟಗಳಾದ ಕೋಕೋ, ಕಬಡ್ಡಿ, ಮರಕೋತಿ ಆಟ ಮತ್ತು ರಂಗೋಲಿ ಬಿಡಿಸುವಿಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು ಶಾಲಾ ಕಾಲೇಜುಗಳಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವಂತಹ ವಿವಿಧ ರೀತಿಯ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಲ್ಲಿ ಸುಜನಾತ್ಮಕ ಬೆಳವಣಿಗೆಗೆ ಮುನ್ನುಡಿಯಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು ಸರ್ವ ಶಿಕ್ಷಣ ಅಭಿಯಾನದಲ್ಲಿ ನಲಿ-ಕಲಿ ಎಂದರೆ ಮಗು ಆಡುತ್ತಾ-ನಲಿಯುತ್ತ ಕಲಿಯಬೇಕು. ಬಿ.ಇಡಿ ನಲ್ಲಿ ಕಲೆ ಮತ್ತು ಸಾಹಿತ್ಯ, ನಾಟಕ ಮತ್ತು ಶಿಕ್ಷಣ ಎಂಬ ಪಠ್ಯ ಪುಸ್ತಕವನ್ನು ರೂಪಿಸಿ ಶಾಲಾ ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರು ಅದನ್ನು ಕಡ್ಡಾಯವಾಗಿ ಓದಿ ಶಿಕ್ಷಣದ ಜೊತೆಗೆ ನಾಟಕವನ್ನು ಹೇಗೆ ಒಂದುಗೂಡಿಸಬೇಕು ಎಂಬ ನಿಟ್ಟಿನಲ್ಲಿ ಕಲೆ ಮತ್ತು ಸಾಹಿತ್ಯವನ್ನು ಸಹ ಪಠ್ಯ ಚಟುವಟಿಕೆಯಾಗಿ ಮಾಡಿದೆ ಎಂದು ತಿಳಿಸಿದರು.

ಮಕ್ಕಳು ಇಂದು ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ಎಲ್ಲರೂ ತಮ್ಮಲ್ಲಿ ಆತ್ಮಸ್ಥೈರ್ಯ, ಆತ್ಮಭಿಮಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾದಾಗ ಪರಿಪೂರ್ಣ ವ್ಯಕ್ತಿಯಾಗಿ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಆಂಗ್ಲ ಮಾಧ್ಯಮವು ಸಮಾಜದ ಇವತ್ತಿನ ಕಾಲಘಟ್ಟಕ್ಕೆ ಅವಶ್ಯಕವಿದೆ. ಆದರೆ ಕೇವಲ ಒಂದೇ ಭಾಷೆಗೆ ಸೀಮಿತವಾಗದೇ ಎಲ್ಲವನ್ನೂ ಕಲಿಯಬೇಕು ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವವನ್ನು ಕಾಣಲು ಸಾಧ್ಯ ಎಂದರು.

ಸೋಲು ಗೆಲುವು ಎನ್ನುವುದು ಒಂದು ನಾಣ್ಯದ ಎರಡು ಮುಖವಿದ್ದಂತೆ, ಹಾಗಾಗಿ ಮಕ್ಕಳೂ ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮವಾಗಿ ಭಾಗವಹಿಸಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಮತ್ತು ಸದೃಢ ಸಮಾಜವನ್ನು ಮಾಡಿ ಸಮ ಸಮಾಜವನ್ನು ಕಟ್ಟೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ಎಂಟರ್ ಪ್ರೆನ್ಯೂರ್ಶಿಪ್-ಬಿಸಿನೆಸ್ ಸ್ಕೂಲ್ನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ.ಕೆ ಅಪರ್ಣಾ ರಾವ್, ಪ್ರೊ. ವೆಂಕಟರಮಣ ಶೆಟ್ಟಿ, ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿ.ವಿ ಶ್ರೀನಾಥ್ ಶೆಟ್ಟಿ ಹಾಗೂ ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಸಮೂಹ ಸಂವಹನದ ಅಧ್ಯಕ್ಷರಾದ ಡಾ. ಶೈಲೇಶ್ ರಾಜ್ ಅರಸ್ ಜಿ.ಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.