ಮೈಸೂರು : ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿ ದೇಶದ ಗಮನ ಸೆಳೆದಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮನೆಗೆ ಗಣೇಶ ವಿಗ್ರಹ ಕೆತ್ತನೆ ಮಾಡಿ ಕೊಟ್ಟಿದ್ದು ಸುದ್ದಿಯಲ್ಲಿದೆ. ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲು ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆಗೆ ಸಿದ್ಧತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕುರುಕ್ಷೇತ್ರದಲ್ಲಿ ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆಗೆ ಈಗಾಗಲೇ ಕಲ್ಲಿಗೆ ಪೂಜೆ ಸಲ್ಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷ್ಣನ ವಿಶ್ವರೂಪ ಮೂರ್ತಿಗಾಗಿ 18 ಅಂತಸ್ತಿನ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ. ಅದರ ಒಳಗಡೆ ಕೃಷ್ಣನ ವಿಶ್ವರೂಪ ವಿಗ್ರಹ ಪ್ರತಿಷ್ಠೆ ಮಾಡಲಾಗುತ್ತದೆ. ಅದಕ್ಕಾಗಿ ಹೋಮ್ ವರ್ಕ್ ಶುರು ಮಾಡಿದ್ದೇನೆ. ಇದು ಮುಗಿದ ನಂತರ ಕೆಲಸ ಆರಂಭಿಸುತ್ತೇನೆ.
ಈ ವಿಗ್ರಹಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಲಾಗುತ್ತಿದೆ. ವಿಗ್ರಹ ಕೆತ್ತನೆ ಆರಂಭಿಸಲು ಯಾವುದೇ ಸಮಯ ನಿಗದಿಯಾಗಿಲ್ಲ. ಸಾವಕಾಶವಾಗಿ ಕೆತ್ತನೆ ಮಾಡಲಾಗುತ್ತದೆ ಎಂದು ಯೋಗಿರಾಜ್ ತಿಳಿಸಿದ್ದಾರೆ.
ಕೃಷ್ಣನ ವಿಶ್ವರೂಪ ವಿಗ್ರಹದ ಹತ್ತು ಮುಖಗಳಿಗೆ ಭಾವ ತುಂಬುವುದು ಸವಾಲಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೈಸೂರಿನಲ್ಲಿಯೇ ಮೂರ್ತಿ ಕೆತ್ತನೆ ಮಾಡಿ ಕೊಂಡೊಯ್ಯಲು ಅವಕಾಶ ಕೇಳಿದ್ದೇನೆ.
ಇಲ್ಲೇ ವಿಗ್ರಹ ಕೆತ್ತಿ ಕುರುಕ್ಷೇತ್ರಕ್ಕೆ ತೆಗೆದುಕೊಂಡು ಹೋಗಲಾಗುವುದು. ಅವರು ಅನುಮತಿ ನೀಡಿದರೆ ಮೈಸೂರಿನ ಜನರಿಗೆ ತೋರಿಸಿ ನಂತರ ಕುರುಕ್ಷೇತ್ರಕ್ಕೆ ವಿಗ್ರಹ ಕೊಂಡೊಯ್ಯಲಾಗುವುದು ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.














