ಆರುಣಿ ಉದ್ಧಾಲಕನ ಈ ಕಥೆಯು ವ್ಯಾಸಮಹಾಭಾರತದ ಆದಿಪರ್ವದ ಪೌಷ್ಯ ಪರ್ವದಲ್ಲಿ (ಅಧ್ಯಾಯ ೩) ಬರುತ್ತದೆ. ಈ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತ ಪೌರಾಣಿಕ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಹೇಳಿದನು.
ಧೌಮ್ಯ ಎನ್ನುವ ಹೆಸರಿನ ಋಷಿಗೆ ಆರುಣಿ ಎಂಬ ಹೆಸರಿನ ಶಿಷ್ಯನಿದ್ದನು. ಒಂದು ದಿನ ಅವನು ಶಿಷ್ಯ ಆರುಣಿ ಪಾಂಚಾಲನನ್ನು “ಹೋಗು. ಭತ್ತದ ಗದ್ದೆಗೆ ಒಡ್ಡನ್ನು ಕಟ್ಟು!” ಎಂದು ಕಳುಹಿಸಿದನು. ಉಪಾಧ್ಯಾಯನಿಂದ ಈ ರೀತಿ ಆದೇಶಪಡೆದ ಪಾಂಚಾಲ ಆರುಣಿಯು ಅಲ್ಲಿಗೆ ಹೋದನು. ಆದರೆ ಭತ್ತದ ಗದ್ದೆಗೆ ಒಡ್ಡನ್ನು ಹಾಕಲು ಅವನಿಗೆ ಸಾದ್ಯವಾಗಲಿಲ್ಲ. “ಕಷ್ಟವಾಯಿತಲ್ಲ!” ಎಂದು ಯೋಚಿಸುತ್ತಿರುವಾಗ ಒಂದು ಉಪಾಯವನ್ನು ಕಂಡನು. “ಈ ರೀತಿ ಮಾಡುತ್ತೇನೆ” ಎಂದು ಅವನು ಭತ್ತದ ಗದ್ದೆಯಲ್ಲಿ ನೀರು ಹರಿಯುವಲ್ಲಿ ಅಡ್ಡಾಗಿ ಮಲಗಿಕೊಂಡನು. ಸ್ವಲ್ಪ ಸಮಯದ ನಂತರ ಅಯೋದ ಧೌಮ್ಯನು ಶಿಷ್ಯರನ್ನು ಕೇಳಿದನು: “ಪಾಂಚಾಲ ಆರುಣಿಯು ಎಲ್ಲಿ ಹೋಗಿದ್ದಾನೆ?”
ಅವರು ಉತ್ತರಿಸಿದರು: “ನೀವೇ ಕಳುಹಿಸಿದಂತೆ ಅವನು ಭತ್ತದ ಗದ್ದೆಗೆ ಒಡ್ಡನ್ನು ಕಟ್ಟಲು ಹೋಗಿದ್ದಾನೆ.” ಶಿಷ್ಯರ ಈ ಮಾತಿಗೆ “ನಾವೆಲ್ಲರೂ ಅವನು ಇದ್ದಲ್ಲಿಗೆ ಹೋಗೋಣ” ಎಂದು ಹೇಳಿ ಅವನು ಅಲ್ಲಿಗೆ ಹೋಗಿ ಗಟ್ಟಿ ಧ್ವನಿಯಲ್ಲಿ ಕೂಗಿ ಕರೆದನು: “ಪಾಂಚಾಲ ಆರುಣ! ಎಲ್ಲಿದ್ದೀಯೆ? ವತ್ಸ! ಇಲ್ಲಿ ಬಾ.”
ಉಪಾದ್ಯಾಯನ ಮಾತುಗಳನ್ನು ಕೇಳಿ ಆರುಣಿಯು ಭತ್ತದ ಗದ್ದೆಯಿಂದ ಮೇಲೆ ಬಂದು ಉಪಾದ್ಯಾಯನ ಎದುರು ನಿಂತು ನಮಸ್ಕರಿಸಿ ಹೇಳಿದನು: “ನಾನು ನೀರು ಹರಿಯುವ ಕಾಲುವೆಯಲ್ಲಿದ್ದೆನು. ಬೇರೆ ಯಾವರೀತಿಯಿಂದಲೂ ನೀರನ್ನು ತಡೆಗಟ್ಟಲು ಅಸಮರ್ಥನಾಗಿ ನಾನೇ ಸ್ವತಃ ಕಾಲುವೆಯ ಅಡ್ಡ ಮಲಗಿಕೊಂಡು ನೀರು ಹರಿಯದಂತೆ ತಡೆಗಟ್ಟಿದೆ. ನಿಮ್ಮ ಧ್ವನಿಯನ್ನು ಕೇಳಿ ಎದ್ದು ನೀರುಹರಿಯಲು ಬಿಟ್ಟೆ. ಭಗವನ್! ನಿಮಗೆ ಅಭಿವಾದಿಸುತ್ತೇನೆ. ಆಜ್ಞೆಯನ್ನು ನೀಡಿ. ನಾನೀಗ ಏನು ಮಾಡಲಿ?”
ಆಗ ಉಪಾದ್ಯಾಯನು ಹೇಳಿದನು: “ನೀನು ಭತ್ತದ ಗದ್ದೆಯ ಕಾಲುವೆಯಲ್ಲಿ ಅಡ್ಡ ಮಲಗಿ ನೀರು ಹರಿಯುವುದನ್ನು ನಿಲ್ಲಿಸಿದ್ದೀಯೆ. ಆದುದರಿಂದ ನಿನ್ನ ಹೆಸರು ಇನ್ನು ಮುಂದೆ ಉದ್ದಾಲಕ ಎಂದಾಗಲಿ.” ಉಪಾದ್ಯಾಯನು ಅವನಿಗೆ ಈ ರೀತಿ ಅನುಗ್ರಹವಿತ್ತನು: “ನನ್ನ ವಚನವನ್ನು ಪರಿಪಾಲಿಸಿದುದಕ್ಕಾಗಿ ನಿನಗೆ ಶ್ರೇಯಸ್ಸು ದೊರೆಯುತ್ತದೆ. ಸರ್ವ ವೇದಗಳು ಮತ್ತು ಸರ್ವ ಧರ್ಮಶಾಸ್ತ್ರಗಳು ನಿನ್ನಲ್ಲಿ ಪ್ರತಿಭೆಗೊಳ್ಳುತ್ತವೆ.”
ಉಪಾದ್ಯಾಯನ ಈ ಮಾತುಗಳನ್ನು ಕೇಳಿ ಅವನು ತನಗೆ ಇಷ್ಟಬಂದ ದೇಶಕ್ಕೆ ಹೊರಟುಹೋದನು.