ಮನೆ ಕಾನೂನು ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಆಗಸ್ಟ್​ 8ರವರೆಗೆ ವಿಸ್ತರಣೆ

ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಆಗಸ್ಟ್​ 8ರವರೆಗೆ ವಿಸ್ತರಣೆ

0

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿ ಆಗಸ್ಟ್​ 8ರವರೆಗೆ ವಿಸ್ತರಿಸಲಾಗಿದೆ. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Join Our Whatsapp Group

ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22 ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚವನ್ನು ಪಾವತಿಸಿದ ಕೆಲವು ಡೀಲರ್‌ಗಳಿಗೆ ಸಹಾಯ ಮಾಡಿದೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಆಮ್ ಆದ್ಮಿ ಪಕ್ಷ ನಿರಾಕರಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 21 ರಿಂದ ಜೈಲಿನಲ್ಲಿದ್ದಾರೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಮೇ 10 ರಂದು, ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಅವರಿಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿತು. ಚುನಾವಣೆ ಮುಗಿದ ತಕ್ಷಣ ಜೂನ್ 2ರಂದು ಜೈಲಿಗೆ ಮರಳಿದ್ದರು.

ಕಳೆದ ವಿಚಾರಣೆಯಲ್ಲಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 25 ರವರೆಗೆ ವಿಸ್ತರಿಸಿದ್ದರು. ತಿಹಾರ್ ಜೈಲಿನಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರ ಹಾಜರಾರಾಗಿದ್ದರು. ಕೇಜ್ರಿವಾಲ್ ಮತ್ತು ಇತರ ಆರೋಪಿಗಳ ಪರ ವಕೀಲರಿಗೆ ಪೂರಕ ಆರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನ್ಯಾಯಾಲಯ ಸೂಚಿಸಿದೆ.

ಜುಲೈ 9 ರಂದು, ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯವು ಪರಿಗಣಿಸಿತ್ತು. ವಿನೋದ್ ಚೌಹಾಣ್ ಮತ್ತು ಆಶಿಶ್ ಮಾಥುರ್ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ಅನ್ನು ಸಹ ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ.

ನ್ಯಾಯಾಲಯವು ಚಾರ್ಜ್ ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್, ವಿನೋದ್ ಚೌಹಾಣ್ ಮತ್ತು ಎಎಪಿಗೆ ಪ್ರೊಡಕ್ಷನ್ ವಾರಂಟ್ ಹೊರಡಿಸಿತ್ತು. ತನಿಖಾ ಅಧಿಕಾರಿ (ಐಒ) ಮೂಲಕ ಆಶಿಶ್ ಮಾಥುರ್ ಅವರಿಗೆ ಸಮನ್ಸ್ ನೀಡಲಾಗಿದೆ.

ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಜುಲೈ 1 ರಂದು ಇಡಿ ವಿನೋದ್ ಚೌಹಾಣ್ ಮತ್ತು ಆಶಿಶ್ ಮಾಥುರ್ ವಿರುದ್ಧ ಮತ್ತೊಂದು ಪೂರಕ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿತ್ತು.