ಮೈಸೂರು(Mysuru): ಆಷಾಢ ಮಾಸದ ಆಷಾಢ ಶುಕ್ರವಾರ ಹಾಗೂ ತಾಯಿ ವರ್ಧಂತಿಯಂದು ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಶಾಸಕ ರಾಮದಾಸ್, ಜುಲೈ 1 ರಿಂದ ಜುಲೈ 28 ರ ತನಕ ಆಷಾಢ ಶುಕ್ರವಾರ ಮತ್ತು ತಾಯಿ ವರ್ಧಂತಿಯ ದಿನಗಳಲ್ಲಿ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೈಗೊಳ್ಳಬೇಕಾದ ಕಾರ್ಯಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆ ನಡೆಸಿದ್ದೇನೆ ಎಂದರು.
ಈಗಾಗಲೇ ಪೊಲೀಸರು, ಸಂಚಾರಿ ಪೊಲೀಸರು, ನಗರ ಪಾಲಿಕೆ, ಯುಜಿಡಿ, ವಾಣಿವಿಲಾಸ ನೀರು ಸರಬರಾಜು, ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಎಲ್ಲಾ ಕಡೆ ಸಿಸಿಟಿವಿ ಅಳವಡಿಸಲಾಗುವುದು ಹಾಗೂ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದೆ ನೇರವಾಗಿ ದರ್ಶನ ಮಾಡಲು ಅನುಕೂಲಕರವಾಗುವಂತೆ ಹಾಗೂ ಎಲ್ಇಡಿ ಪರದೆ ಅಳವಡಿಸಲಾಗುವುದು ಎಂದು ಹೇಳಿದರು.
ಮೂರು ವಿಧವಾದ ಸರತಿ ಸಾಲುಗಳನ್ನು ಮಾಡಲಾಗಿದ್ದು ಉಚಿತವಾಗಿ ದರ್ಶನ ಪಡೆಯಲು, ರೂಪಾಯಿ 50ರ ಟಿಕೆಟ್ ಮೂಲಕ ದರ್ಶನ ಪಡೆಯಲು, ಹಾಗೂ 300 ಟಿಕೆಟ್‌ನಲ್ಲಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಯೂನಲ್ಲಿ ನಿಂತು ಬರುವ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಸರತಿ ಸಾಲಿನ ಸ್ಥಳದಲ್ಲಿಯೇ ಇ-ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಕುಂಕುಮ ಹಾಗೂ ಪ್ರಸಾದ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಸ್.ಎ.ರಾಮದಾಸ್ ಹೇಳಿದರು.















