ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಬಹು ನಿರೀಕ್ಷಿತ ಆಶಸ್ ಸರಣಿ ಶುಕ್ರವಾರ ಅಂದರೆ, ಜೂನ್ 16 ರಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲ ದಿನವೇ ಭರ್ಜರಿ ಬ್ಯಾಟಿಂಗ್ ಮಾಡಿ 393 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟವನ್ನು ಇಲ್ಲಿಯೂ ಮುಂದುವರೆಸಿರುವ ಇಂಗ್ಲೆಂಡ್ ಆಶಸ್ ಇತಿಹಾಸದಲ್ಲಿ 29 ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ಮತ್ತೊಮ್ಮೆ ಪುನಾರವರ್ತಿಸಿದೆ.
ವಾಸ್ತವವಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಜ್ಯಾಕ್ ಕ್ರೌಲಿ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸುವ ಮೂಲಕ ಹಳೆಯ ದಾಖಲೆಯನ್ನು ಮತ್ತೊಮ್ಮೆ ಪುನಾರವರ್ತಿಸಿದರು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಬೌಲ್ ಮಾಡಿದ ಮೊದಲ ಓವರ್ ನ ಮೊದಲ ಎಸೆತವನ್ನು ಕವರ್ ದಿಕ್ಕಿನಲ್ಲಿ ಸ್ಮ್ಯಾಶ್ ಮಾಡುವ ಮೂಲಕ ಕ್ರೌಲಿ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಕ್ರೌಲಿ ಅವರ ಈ ಅದ್ಭುತ ಶಾಟ್ ನೋಡಿದ ಪ್ರೇಕ್ಷಕರು ಮತ್ತು ಇಂಗ್ಲೆಂಡ್ ಪಾಳಯ ಅಚ್ಚರಿಕೊಂಡರು. ಇದರೊಂದಿಗೆ ಕ್ರೌಲಿ ತಂಡಕ್ಕೆ ಸ್ಫೋಟಕ ಆರಂಭವನ್ನು ನೀಡಿದರು. ವಿಚಿತ್ರ ಸಂಗತಿಯೆಂದರೆ, ಕಳೆದ ಬಾರಿಯ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತ್ತು.
ಆ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಿದ್ದ ಮಿಚೆಲ್ ಸ್ಟಾರ್ಕ್ ಮೊದಲ ಎಸೆತದಲ್ಲಿಯೇ ರೋರಿ ಬರ್ನ್ಸ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದ್ದರು. ಆದರೆ ಕಳೆದ 12 ತಿಂಗಳಿಂದ ಬೇರೆ ರೀತಿಯದ್ದೆ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ತಂಡ ಈ ಬಾರಿ ಕಾಂಗರೂಗಳಿಗೆ ಭರ್ಜರಿ ತಿರುಗೇಟು ನೀಡಿದೆ.
ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿಯ ಆಶಸ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಕ್ರೌಲಿ, 29 ವರ್ಷಗಳ ಹಿಂದಿನ ದಾಖಲೆಯನ್ನು ಮತ್ತೊಮ್ಮೆ ಪುನಾರವರ್ತಿಸಿದ್ದಾರೆ. 29 ವರ್ಷಗಳ ಹಿಂದೆ ಅಂದರೆ, 1994 ರಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಸ್ಲೇಟರ್, ಗಬ್ಬಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದ ಮೊದಲ ಚೆಂಡನ್ನು ಬೌಂಡರಿಗಟ್ಟುವ ಮೂಲಕ ಈ ದಾಖಲೆ ಬರೆದಿದ್ದರು.
ಹಾಗೆಯೇ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, 2001ರ ಆಶಸ್ ಸರಣಿಯ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಇದೇ ಮೈಕೆಲ್ ಸ್ಲೇಟರ್ ಬೌಂಡರಿ ಬಾರಿಸುವ ಮೂಲಕ ಇನ್ನಿಂಗ್ಸ್ ಆರಂಭಿಸಿದ್ದರು. ಇದೀಗ ಇಂಗ್ಲೆಂಡ್ ಪರ ಕ್ರೌಲಿ ಈ ದಾಖಲೆ ಬರೆದಿದ್ದು, ಆಶಸ್ ಗೆ ಮತ್ತಷ್ಟು ರಂಗು ತಂದಿದೆ.
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 78 ಓವರ್‌ಗಳ ಬ್ಯಾಟಿಂಗ್ ಮಾಡಿ 393 ರನ್ ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 14 ರನ್ ಬಾರಿಸಿ, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.