ಬೆಂಗಳೂರು: ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆ ವೇಳೆಗೆ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ಈಡಿಗರ ಸಂಪ್ರದಾಯದ ಪ್ರಕಾರ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಸ್ಪಂದನಾ ಅವರ ಅಂತಿಮಯಾತ್ರೆ ನಡೆಯಲಿದೆ.
ಇನ್ನು ಹಲವು ಗಣ್ಯಾತೀಗಣ್ಯರು ಆಗಮಿಸಿ ಸ್ಪಂದನಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಕೂಡ ಹೃದಯಾಘಾತದಿಂದ ಮೃತಪಟ್ಟರು. ಕಣ್ಣೆದುರೇ ಅವರನ್ನು ಅಶ್ವಿನಿ ಕಳೆದುಕೊಂಡರು. ಅಶ್ವಿನಿ ಅವರಿಗೆ ಆ ನೋವು ಇನ್ನೂ ಕಡಿಮೆ ಆಗಿಲ್ಲ. ಸ್ಪಂದನಾ ಸಾವು ಮತ್ತಷ್ಟು ನೋವು ಕೊಟ್ಟಿದೆ. ಈ ಕಾರಣಕ್ಕೆ ಅಶ್ವಿನಿ ಕಣ್ಣೀರು ಹಾಕಿದ್ದಾರೆ.
ಅಶ್ವಿನಿ ಪುನೀತ್ ರಾಜ್ ಕುಮಾರ್, ಮಗಳು ಕೂಡ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಬಂದಿದ್ದು, ಅವರು ಕೂಡ ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನಕ್ಕೆ ಬಂದ ಅನೇಕರು ವಿಜಯ್ ರಾಘವೇಂದ್ರ ಅವರನ್ನು ಸಮಾಧಾನ ಮಾಡಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಚಿನ್ನೇ ಗೌಡ ಅವರ ಮಕ್ಕಳು ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ. ಹೀಗಾಗಿ ರಾಜ್ ಕುಟುಂಬದ ಜೊತೆಗೆ ಇವರಿಗೆ ನಂಟಿದೆ. ಸ್ಪಂದನಾ ಕೂಡ ರಾಜ್ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.