ಮನೆ ಕ್ರೀಡೆ ಏಷ್ಯಾ ಕಪ್ 2022: ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಏಷ್ಯಾ ಕಪ್ 2022: ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

0

ಬಾಂಗ್ಲಾ: ಏಷ್ಯಾ ಕಪ್ 2022ರ ಫೈನಲ್ ಪಂದ್ಯದಲ್ಲಿ ಲಂಕಾ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಟೀಂ ಇಂಡಿಯಾ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಟೀಂ ಇಂಡಿಯಾ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದರು. ಲಂಕಾ ಪರ ಓಷದಿ ರಣಸಿಂಗ್(13) ಇನೋಕಾ ರಣವೀರ ಅಜೇಯ 18 ರನ್ ಬಿಟ್ಟರೆ ಮತ್ಯಾವ ಆಟಗಾರ್ತಿಯೂ ಎರಡಂಕಿ ದಾಟಲಿಲ್ಲ.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಲಂಕಾ ತಂಡವನ್ನು 65 ರನ್ ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಲಂಕಾ ನೀಡಿದ 66 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 71 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ ಸ್ಮೃತಿ ಮಂದಾನಾ ಅಜೇಯ 51 ಹಾಗೂ ಹರ್ಮನ್ ಪ್ರೀತ್ ಕೌರ್ ಅಜೇಯ 11 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಶಫಾಲಿ ವರ್ಮಾ 5 ರನ್ ಹಾಗೂ ಜೆಮಿಮಾ ರಾಡ್ರಿಗಸ್ 2 ರನ್ ಬಾರಿಸಿದ್ದಾರೆ.

ಇಲ್ಲಿಯವರೆಗೂ ಏಷ್ಯಾಕಪ್ 8 ಆವೃತ್ತಿಗಳು ನಡೆದಿದ್ದು ಇದರಲ್ಲಿ ಭಾರತ ಬರೋಬ್ಬರಿ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನುಳಿದಂತೆ 2018ರ ಟೂರ್ನಿಯಲ್ಲಿ ಬಾಂಗ್ಲಾದೇಶ ಚಾಂಪಿಯನ್ ಆಗಿದ್ದು ಭಾರತ ರನ್ ಅಪ್ ಆಗಿತ್ತು.