ಮನೆ ಕ್ರೀಡೆ ಏಷ್ಯಾ ಕಪ್‌: ಹಾಂಗ್‌ ಕಾಂಗ್‌ ವಿರುದ್ಧ ಸೆಣಸಲಿರುವ ಭಾರತ ತಂಡ

ಏಷ್ಯಾ ಕಪ್‌: ಹಾಂಗ್‌ ಕಾಂಗ್‌ ವಿರುದ್ಧ ಸೆಣಸಲಿರುವ ಭಾರತ ತಂಡ

0

ದುಬೈ (Dubai): ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬುಧವಾರ ಹಾಂಗ್‌ಕಾಂಗ್‌ ತಂಡವನ್ನು ಎದುರಿಸಲಿದೆ.

ಪಾಕಿಸ್ತಾನ ಮತ್ತು ಭಾರತ ಮೂಲದ ಆಟಗಾರರನ್ನೇ ಒಳಗೊಂಡಿರುವ ಹಾಂಗ್‌ಕಾಂಗ್‌ ತಂಡ, ರೋಹಿತ್‌ ಶರ್ಮ ಬಳಗಕ್ಕೆ ಸರಿಸಾಟಿಯಾಗಿ ನಿಲ್ಲದು. ಆದ್ದರಿಂದ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೋರಾಟ ಭಾರತಕ್ಕೆ ‘ಅಭ್ಯಾಸ ಪಂದ್ಯ’ ಎನಿಸಿಕೊಂಡಿದೆ.

ಹಾಂಗ್‌ಕಾಂಗ್‌ ಹೆಚ್ಚಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರುವುದರಿಂದ ಆ ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದ ಶಕ್ತಿ, ದೌರ್ಬಲ್ಯದ ಬಗ್ಗೆ ತಿಳಿದಿಲ್ಲ. ಆದ್ದರಿಂದ ಭಾರತ ಎಚ್ಚರಿಕೆಯಿಂದಲೇ ಆಡಬೇಕಿದೆ.

ಟೂರ್ನಿಯ ‘ಸೂಪರ್‌ ಫೋರ್‌’ ಹಂತಕ್ಕೆ ಮುನ್ನ ಫಾರ್ಮ್‌ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಆಟಗಾರರಿಗೆ ಈ ಪಂದ್ಯ ಉತ್ತಮ ಅವಕಾಶ ಕಲ್ಪಿಸಿದೆ. ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಕೆ.ಎಲ್.ರಾಹುಲ್‌ಗೆ ಬುಧವಾರದ ಪಂದ್ಯ ಮಹತ್ವದ್ದು. ಭರ್ಜರಿ ಆಟವಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅವರಿಗೆ ವೇದಿಕೆ ಲಭಿಸಿದೆ. ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಎಡವುತ್ತಿರುವ ವಿರಾಟ್‌ ಕೊಹ್ಲಿ ಕೂಡಾ ಈ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರಯೋಗಗಳು ಮುಂದುವರಿಯಲಿದೆ ಎಂದು ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ಈ ಪಂದ್ಯಕ್ಕೆ ಅಂತಿಮ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು.

ದಿನೇಶ್‌ ಕಾರ್ತಿಕ್‌ ಬದಲು ರಿಷಭ್‌ ಪಂತ್‌ಗೆ ಅವಕಾಶ ಲಭಿಸುವುದೇ ಎಂಬುದನ್ನು ನೋಡಬೇಕು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ನಡೆದರೂ ಅಚ್ಚರಿಯಿಲ್ಲ. ಪಾಕ್‌ ಎದುರು ರವೀಂದ್ರ ಜಡೇಜ ಬಡ್ತಿ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಯಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಿ, ರವಿಚಂದ್ರನ್‌ ಅಶ್ವಿನ್‌ ಹಾಗೂ ರವಿ ಬಿಷ್ಣೊಯಿಗೆ ಅವಕಾಶ ನೀಡುವ ಆಲೋಚನೆಯನ್ನೂ ತಂಡದ ಆಡಳಿತ ಮಾಡಿದೆ.