ಮನೆ ಕ್ರೀಡೆ ಏಷ್ಯಾ ಕಪ್‌: ಮೊದಲೆರಡು ಪಂದ್ಯಗಳಿಂದ ಹೊರಗುಳಿದ ಕೆ.ಎಲ್ ರಾಹುಲ್

ಏಷ್ಯಾ ಕಪ್‌: ಮೊದಲೆರಡು ಪಂದ್ಯಗಳಿಂದ ಹೊರಗುಳಿದ ಕೆ.ಎಲ್ ರಾಹುಲ್

0

ಬೆಂಗಳೂರು: ಮುಲ್ತಾನ್‌ ನಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಮುಂಬರುವ ಏಷ್ಯಾ ಕಪ್‌ ನ ಮೊದಲ ಎರಡು ಪಂದ್ಯಗಳಿಂದ ಭಾರತದ ವಿಕೆಟ್‌ ಕೀಪರ್-ಬ್ಯಾಟರ್ ಕೆ ಎಲ್ ರಾಹುಲ್ ಹೊರಗುಳಿದಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಪ್ರಕಟಿಸಿದ್ದಾರೆ.

ಇದಕ್ಕೂ ಮುನ್ನ ತಂಡವನ್ನು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ರಾಹುಲ್ ಸ್ವಲ್ಪ ನಿಗಲ್ ನಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಕೆಎಲ್ ಗೆ ಒಂದು ವಾರದ ವಿರಾಮದ ಅಗತ್ಯವಿದೆ ಎಂದಿದ್ದಾರೆ.

 “ಕೆಎಲ್ ರಾಹುಲ್ ನಮ್ಮೊಂದಿಗೆ ಉತ್ತಮವಾಗಿ ವಾರ ಕಳೆದರು. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಏಷ್ಯಾಕಪ್ ನ ಕ್ಯಾಂಡಿ ಲೆಗ್‌ ಗೆ ಮೊದಲ ಭಾಗಕ್ಕೆ ಅವರು ಅಲಭ್ಯರಾಗುತ್ತಾರೆ” ಎಂದು ದ್ರಾವಿಡ್ ಲಂಕಾ ಪ್ರವಾಸಕ್ಕೆ ಮುನ್ನ ಹೇಳಿದರು.

ಕೆಎಲ್ ರಾಹುಲ್ ಎನ್‌ ಸಿಎಗೆ ಹಿಂತಿರುಗಲಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಸೆಪ್ಟೆಂಬರ್ 4 ರಂದು ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಕೋಚ್ ಹೇಳಿದರು.

ಏಷ್ಯಾ ಕಪ್‌ ನ ಮೊದಲ ಪಂದ್ಯ ಬುಧವಾರ ಮುಲ್ತಾನ್‌ ನಲ್ಲಿ ಸಹ-ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಟೀಂ ಇಂಡಿಯಾ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.