ದುಬೈ(Dubai): ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಯ ಸೂಪರ್–4 ಹಂತದ ಪಂದ್ಯದ ಬಳಿಕ ಅಫ್ಗಾನ್ ತಂಡದ ಅಭಿಮಾನಿಗಳ ದುರ್ವರ್ತನೆ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಕಿಡಿಕಾರಿದ್ದಾರೆ.
ಕ್ರೀಡಾಂಗಣದಲ್ಲಿ ಅಫ್ಗಾನಿಸ್ತಾನದ ಅಭಿಮಾನಿಗಳು ಕುರ್ಚಿಗಳನ್ನು ಮುರಿದು ಅವುಗಳನ್ನು ಪಾಕಿಸ್ತಾನ ಬೆಂಬಲಿಗರ ಕಡೆಗೆ ಎಸೆಯುತ್ತಿರುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಶಫಿಕ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಅಫ್ಗಾನಿಸ್ತಾನದ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ನೋಡಿ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಮಾಡಿದ್ದನ್ನೇ ಈಗಲೂ ಮಾಡುತ್ತಿದ್ದಾರೆ. ಇಂದೊಂದು ಕ್ರಿಕೆಟ್ ಪಂದ್ಯ, ಕ್ರೀಡಾಸ್ಫೂರ್ತಿಯಿಂದ ನಡೆದುಕೊಳ್ಳಬೇಕಿತ್ತು. ಈ ಕ್ರೀಡೆಯಲ್ಲಿ ನೀವು ಮತ್ತಷ್ಟು ಬೆಳೆಯಬೇಕೆಂದುಕೊಂಡಿದ್ದರೆ ನಿಮ್ಮ ಅಭಿಮಾನಿಗಳ ಸಮೂಹ ಮತ್ತು ನಿಮ್ಮ ಆಟಗಾರರು ಕೆಲವು ವಿಷಯಗಳನ್ನು ಕಲಿಯಬೇಕಿದೆ ಎಂದು ತಿಳಿ ಹೇಳಿದ್ದಾರೆ.
ಅಖ್ತರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಶಫೀಕ್ ಸ್ಟಾನಿಕ್ಜೈ ಅವರು, ಅಭಿಮಾನಿಗಳ ಭಾವನೆಗಳನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ಘಟನೆಯ ಬಗ್ಗೆ ಮಾತನಾಡುವಾಗ ಇಡೀ ರಾಷ್ಟ್ರವನ್ನು ತರಬಾರದು ಎಂದು ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನ್ ತಂಡವು, 129 ರನ್ ಕಲೆ ಹಾಕಿತ್ತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ 19ನೇ ಓವರ್ ಬಳಿಕ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು. ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ನಸೀಮ್ ಶಾ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು.