ಹ್ಯಾಂಗ್‌ಝೌ (ಚೀನಾ): ಭಾರತದ ಪುರುಷರ ೧೦ ಮೀಟರ್ ಏರ್ ರೈಫಲ್ ತಂಡವು ವಿಶ್ವದಾಖಲೆಯೊಂದಿಗೆ ಪ್ರಸ್ತುತ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಚಿನ್ನ ಸಂಪಾದಿಸಿತು.
ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವ್ಯಾಂಶ್ ಪನ್ವಾರ್ ಚಿನ್ನಕ್ಕೆ ಗುರಿಯಿಟ್ಟ ಸ್ಪರ್ಧಿಗಳು. ಈವೆಂಟ್‌ನಲ್ಲಿ ಈ ಮೂವರು ೧೮೯೩.೭ ಪಾಯಿಂಟ್ ಗಳಿಸಿದರು. ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಚೀನಾ ಕಂಚು ಜಯಿಸಿತು.
ಇದೇ ವೇಳೆ, ಭಾರತ ತಂಡ ೧೦ ಮೀಟರ್ ಏರ್ ರೈಫಲ್ ನ ವಿಶ್ವದಾಖಲೆ ನಿರ್ಮಿಸಿತು. ಕಳೆದ ತಿಂಗಳು ಚೀನಿ ಸ್ಪರ್ಧಿಗಳ ತಂಡ ೧೮೯೩.೩ ಅಂಕ ಗಳಿಸಿತ್ತು. ಇದೀಗ ಭಾರತ ೧೮೯೩.೭ ಪಾಯಿಂಟ್ ಗಳಿಕೆಯೊಂದಿಗೆ ಈ ದಾಖಲೆ ಅಳಿಸಿ ಹಾಕಿದೆ.
ರೋಯಿಂಗ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಪದಕ ಬಂದಿದೆ. ಪುರುಷರ ೪ನೇ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ ಕಂಚು ಗೆದ್ದರು. ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ ನಲ್ಲಿ ಭಾರತದ ಬಲರಾಜ್ ಪನ್ವಾರ್ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಈ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು. ಚೀನಾದ ಲಿಯಾಂಗ್ ಚಿನ್ನ ಗೆದ್ದರೆ, ಜಪಾನ್ ನ ರ್ಯುಟಾ ಅವರು ಬೆಳ್ಳಿ ಮತ್ತು ಹಾಂಕಾಂಗ್‌ನ ಚುನ್ ಮೂರನೇ ಸ್ಥಾನ ಪಡೆದರು.
ಮಹಿಳೆಯರ ೪x೧೦೦ ಮೀ. ಫ್ರೀಸ್ಟೈಲ್ ರಿಲೇ ಹೀಟ್ ೨ ರಲ್ಲಿ ೩:೫೩.೮೦ ರ ನಂತರ ಫೈನಲ್‌ಗೆ ತಲುಪಿತು. ೩:೫೩.೮೦ ರ ಅದ್ಭುತ ಸಮಯದೊಂದಿಗೆ ಶಿವಾಂಗಿ ಶರ್ಮಾ, ದಿನಿಧಿ ದೇಸಿಂಗು, ಮಾನ ಪಟೇಲ್ ಮತ್ತು ಜಾನ್ವಿ ಚೌಧರಿ ತಂಡವು ಫೈನಲ್ ನಲ್ಲಿ ಸ್ಥಾನ ಪಡೆದುಕೊಂಡಿತು.