ಸೆಪ್ಟೆಂಬರ್ 8 ರಿಂದ ಚೀನಾದ ಹುಲುನ್‌ಬೀರ್‌ನಲ್ಲಿ ಪ್ರಾರಂಭವಾಗಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಕಿ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ.
ಪಂದ್ಯಾವಳಿಯ ಮೊದಲ ದಿನದಂದು ಆತಿಥೇಯ ಚೀನಾ ತಂಡವನ್ನು 3-0 ಗೋಲುಗಳಿಂದ ಮಣಿಸಿದ ಹರ್ಮನ್ ಪ್ರೀತ್ ಪಡೆ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಏಕಪಕ್ಷೀಯವಾಗಿ ಮಣಿಸಿದೆ. ಇದರೊಂದಿಗೆ ಭಾರತ ತಂಡ ಆಡಿರುವ ಎರಡೂ ಪಂದ್ಯಗಳಲ್ಲು ಭರ್ಜರಿ ಜಯ ದಾಖಲಿಸಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಹಾಕಿ ತಂಡ ಆರಂಭದಿಂದಲೂ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಟೀಂ ಇಂಡಿಯಾ ಎರಡು ಗೋಲು ಗಳಿಸಿತು. ಇದರಿಂದಾಗಿ ಭಾರತ ತಂಡ ಜಪಾನ್ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಭಾರತದ ಪರ ಸುಖಜಿತ್ ಸಿಂಗ್ ಮೊದಲ ಗೋಲು ದಾಖಲಿಸಿದರೆ, ಎರಡನೇ ಗೋಲನ್ನು ಅಭಿಷೇಕ್ ಬಾರಿಸಿದರು. ಪಂದ್ಯದ ಮೊದಲ ಕ್ವಾರ್ಟರ್ ನಂತರ ಟೀಂ ಇಂಡಿಯಾ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತು.
ಇದಾದ ಬಳಿಕ ಎರಡನೇ ಕ್ವಾರ್ಟರ್‌ನ ಪಂದ್ಯದ 17ನೇ ನಿಮಿಷದಲ್ಲಿ ಸಂಜಯ್ ಭಾರತದ ಪರ ಮೂರನೇ ಗೋಲು ಬಾರಿಸಿ ಟೀಂ ಇಂಡಿಯಾವನ್ನು ಬಲಿಷ್ಠ ಸ್ಥಿತಿಗೆ ತಂದರು. ಎರಡನೇ ಕ್ವಾರ್ಟರ್ ಮುಗಿದ ನಂತರ ಟೀಂ ಇಂಡಿಯಾ 3-0 ಮುನ್ನಡೆ ಸಾಧಿಸಿತು. ಅಲ್ಲದೆ ಭಾರತ ಮೇಲುಗೈ ಸಾಧಿಸಿದ ಪರಿಣಾಮದಿಂದಾಗಿ ಮುಂದಿನ ಎರಡು ಕ್ವಾರ್ಟರ್‌ಗಳಲ್ಲಿ ಜಪಾನ್ ಸಂಪೂರ್ಣ ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಒಂದೇ ಒಂದು ಗೋಲು ಗಳಿಸಲಿಲ್ಲ. ಆದರೆ ಜಪಾನ್ ಪರ ಪಂದ್ಯದ 41ನೇ ನಿಮಿಷದಲ್ಲಿ ಕಜುಮಾಸಾ ಮಾಟ್ಸುಮೊಟೊ ಮೊದಲ ಗೋಲು ಬಾರಿಸಿದರು.
ಈ ಪಂದ್ಯದ ಮೂರನೇ ಕ್ವಾರ್ಟರ್ ಮುಗಿದ ನಂತರ ಭಾರತ 3-1 ಗೋಲುಗಳಿಂದ ಮುನ್ನಡೆಯಲ್ಲಿತ್ತು. ಆದರೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿದ್ದರಿಂದ ಪಂದ್ಯದ ಕೊನೆಯ ಕೆಲವು ನಿಮಿಷಗಳವರೆಗೂ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಪಂದ್ಯ ಮುಗಿಯುವುದಕ್ಕೆ ಕೆಲವೇ ಕೆಲವು ನಿಮಿಷವಿರುವಾಗ ಭಾರತದ ಪರ ಉತ್ತಮ್ ಸಿಂಗ್ ಮತ್ತು ಸುಖಜಿತ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು. 54ನೇ ನಿಮಿಷದಲ್ಲಿ ಉತ್ತಮ್ ಸಿಂಗ್ ಮತ್ತು 60ನೇ ನಿಮಿಷದಲ್ಲಿ ಸುಖಜಿತ್ ಸಿಂಗ್ ಗೋಲು ಬಾರಿಸಿ ಟೀಂ ಇಂಡಿಯಾವನ್ನು 5-1 ಅಂತರದಿಂದ ಗೆಲ್ಲುವಂತೆ ಮಾಡಿದರು.