ಬೆಂಗಳೂರು: ನಾನು ಆಯವ್ಯಯ ಸಿದ್ಧತೆಗೆ ಕುಳಿತಾಗ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ, ನೆಹರು, ಮಹಾತ್ಮ ಫುಲೆ, ಕುವೆಂಪು ನೆನಪಾಗುತ್ತಾರೆ. ಇವರೆಲ್ಲರ ಕನಸಿನ ನಾಡನ್ನು ಕಟ್ಟುವ ಆಶಯದ ಬಜೆಟ್ ರೂಪಿಸಬೇಕು ಎನ್ನುವುದು ನನ್ನ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರಿಸಿದರು.
ಸಾಮಾಜಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯ ಏನು ಪ್ರಯೋಜನ ಎಂದು ಡಾ.ಬಾಬಾಸಾಹೇಬ್ ಪ್ರಶ್ನಿಸಿದ್ದರು. ಅದಕ್ಕಾಗಿಯೇ ಅವರು, “ರಾಜಕೀಯ ಪ್ರಭುತ್ವದ ತಳಪಾಯ ಸಾಮಾಜಿಕ ಪ್ರಭುತ್ವದಲ್ಲಿರಬೇಕು” ಎಂದಿದ್ದರು. ಬಸವಣ್ಣ ದಾಸೋಹದ ಮಹತ್ವ ಹೇಳಿದ್ದರು. ಹೀಗೆ ಈ ಎಲ್ಲಾ ಮಹಾನುಭಾವರ ಸರ್ವರನ್ನೂ ಒಳಗೊಳ್ಳುವ ಪ್ರಗತಿಯ ಮಾದರಿಯನ್ನು ನಾನು ಪಾಲಿಸಿದ್ದೇನೆ. ಸರ್ವರ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಿದ್ದೇನೆ.
ವಿಶ್ವಗುರುವಿಗೆ ವಿರೋಧ ಪಕ್ಷದ ನಾಯಕ ಸಿಗುತ್ತಿಲ್ಲ
ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಭಾಷಣದಿಂದ ನಾಡಿನ, ದೇಶದ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ ಎನ್ನುವ ಪಾಠವನ್ನು ವಿಶ್ವಗುರುವಿಗೆ ಜನ ಕಲಿಸಿದ್ದಾರೆ ಎಂದರು.
ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಜೆಟ್ ನಲ್ಲಿ ತಂದಿದ್ದೇವೆ. ಬಜೆಟ್ ನಲ್ಲಿ ಹೇಳಿದ್ದಕ್ಕೆ ಹಣ ಕೊಟ್ಟು ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಆಗಲೇ ಜಾರಿ ಮಾಡಿದ್ದೇವೆ.
ನಾವು ಹೇಳಿದ್ದನ್ನು ಮಾಡಿದ್ದೇವೆ. ಬಿಜೆಪಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ” ಎಂದರು. ಆದರೆ ತಾವು ಹೇಳಿದಂತೆ ನಡೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿಯ ಟೊಳ್ಳುತನ, ಬೇಜವಾಬ್ದಾರಿತನ, ನಕಲಿತನ ನಾಡಿನ ಜನರೆದುರು ಬೆತ್ತಲಾಗಿದೆ ಎಂದರು.
ಗುಜರಾತ್ ಮಾದರಿ ಭಾಷಣ ಕೊಚ್ಚುತ್ತಿದ್ದ ಬಿಜೆಪಿಯವರು ಕರ್ನಾಟಕದ ಗ್ಯಾರಂಟಿ ಮಾದರಿಗಳಿಂದ, ಕರ್ನಾಟಕದ ಅಭಿವೃದ್ಧಿ ಮಾದರಿಗೆ ಹೆದರಿದ್ದಾರೆ. ದುಡಿಯುವ ಜನರ ಜೇಬಿನಲ್ಲಿ ಹಣ ಇರಬೇಕು, ಶ್ರಮಿಕ ಜನರ ಜೇಬಿಗೆ ಹಣ ಹಾಕಬೇಕು ಎನ್ನುವುದು ಕರ್ನಾಟಕ ಮಾದರಿ. ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳಬೇಕು ಎನ್ನುವುದು ಬಿಜೆಪಿಯವರ ಗುಜರಾತ್ ಮಾದರಿ.
ಮೋದಿ ಕಂಡರೆ ಚಳಿಜ್ವರ ಬಂದಂಗೆ ನಡುಗುತ್ತಾರೆ
15 ನೇ ಹಣಕಾಸು ಆಯೋಗದಿಂದ ಕರ್ನಾಟಕ ನಾಡಿಗೆ ಅಪಾರ ಅನ್ಯಾಯ ಆಯಿತು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನಮ್ಮ ಪಾಲಿನ, ನಮ್ಮ ಹಕ್ಕಾಗಿದ್ದ 5495 ಕೋಟಿ ಬರಲಿಲ್ಲ. ಕರ್ನಾಟಕದಿಂದಲೇ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಂದ ಇಷ್ಟು ದೊಡ್ಡ ಅನ್ಯಾಯ ಆಯಿತು. ಇದನ್ನು ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರು ಪ್ರಶ್ನಿಸಬೇಕಿತ್ತು. ರಾಜ್ಯ ಬಿಜೆಪಿ ನಾಯಕರು, ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿತ್ತು. ಆದರೆ ಇವರೆಲ್ಲಾ ಮೋದಿ ಅವರ ಎದುರು ನಿಂತು ಕನ್ನಡಿಗರ ಪಾಲನ್ನು ಕೇಳಲು ಚಳಿ ಜ್ವರ ಬಂದವರಂತೆ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.
ಗುಜರಾತ್ ಮಾದರಿಯಲ್ಲಿ ಪೆನ್ನು, ಪೆನ್ಸಿಲ್, ಬಿಸ್ಕೆಟ್, ಬೆಣ್ಣೆ, ಮಂಡಕ್ಕಿ ಮೇಲೂ ಟ್ಯಾಕ್ಸ್ ಹಾಕಿದರು. ಕರ್ನಾಟಕ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6 ರಿಂದ 8 ಸಾವಿರ ರೂಪಾಯಿ ಉಳಿತಾಯ, ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರತೀ ದಿನ ನಾಡಿನ ಜನತೆ ನಮ್ಮ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತೀ ದಿನ ಪ್ರತೀ ಕುಟುಂಬಕ್ಕೆ ಸರ್ಕಾರದ ಸ್ಪಂದನೆ ಸಿಗುತ್ತಿದೆ. ಇದು ಬಿಜೆಪಿಯ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಅವರ ಹೊಟ್ಟೆಕಿಚ್ಚು ಅವರನ್ನೇ ಸುಡುತ್ತದೆ ಎಂದರು.