ಕುಂದಾಪುರ: ಅಮಾಸೆಬೈಲಿನಲ್ಲಿ ಮೂರೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಾಯಿ ಹಾಗೂ ಆಕೆಯ ಪ್ರಿಯಕರನ ಜಾಮೀನು ಅರ್ಜಿಯನ್ನು ಮಂಗಳವಾರ ನ್ಯಾಯಾಲಯ ತಿರಸ್ಕರಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಸೆ.13ರಂದು ತಾಯಿ, ಅನಾರೋಗ್ಯದ ಕಾರಣ ನೀಡಿ ಗಾಯಗೊಂಡ ಮಗುವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದಿದ್ದ ವೇಳೆ ಮಗುವಿನ ದೇಹದಲ್ಲಿ ತೀವ್ರ ಗಾಯಗಳು ಪತ್ತೆಯಾಗಿತ್ತು. ಗಾಯಗಳ ಬಗ್ಗೆ ತಾಯಿ ಪೂರ್ಣಪ್ರಿಯಾ ಯಾವುದೇ ಮಾಹಿತಿ ನೀಡದೇ, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಇತ್ತು. ಅದನ್ನು ನೋಡಿ ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದ ಮಗು ಚೇತರಿಸಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹೇಶ್ ದೇವಾಡಿಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಮಾಸೆಬೈಲು ಠಾಣೆಗೆ ದೂರು ನೀಡಿದ್ದರು.
ಮಗು ಚೇತರಿಸಿದ ಬಳಿಕ ತಾಯಿ ಮಗುವನ್ನು ವಿಚಾರಣೆ ನಡೆಸಲಾಗಿದೆ. ಮಗು ಜಾರಿ ಬಿದ್ದು ಗಾಯಗೊಂಡಿದೆ ಎಂದು ತಾಯಿ ಹೇಳಿಕೆ ನೀಡಿದ್ದಾಗ ಮಕ್ಕಳ ರಕ್ಷಣಾ ಸಮಿತಿ ತೀವ್ರ ವಿಚಾರಣೆ ನಡೆಸಿ ಹಲ್ಲೆ ಪ್ರಕರಣ ಬಯಲಿಗೆ ಎಳೆದಿತ್ತು. ಮಗು ಮಂಚದಲ್ಲಿ ಮಲಗಬಾರದು ಎಂದು ತಂದೆಯನ್ನು ಕಳಕೊಂಡ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರ ಸುಹೇಲ್ ಮಗುವಿನ ಖಾಸಗಿ ಅಂಗ ಸಹಿತ ಮೈಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಅ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿಗಳಿಗೆ ನ್ಯಾಯಾಲಯ ಮಧ್ಯಾಂತರ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್, ಜಾಮೀನು ರದ್ದು ಮಾಡಲು ಮನವಿ ಮಾಡಿದರು. ಅದರಂತೆ ಮಂಗಳವಾರ ವಿಚಾರಣೆ ನಡೆದು ಎರಡನೆ ಹೆಚ್ಚುವರಿ ಸಿವಿಲ್ ಕೋರ್ಟ್ ಜೆಎಂಎಫ್‌ಸಿಯಲ್ಲಿ ಇಬ್ಬರ ಮಧ್ಯಾಂತರ ಜಾಮೀನು ಅರ್ಜಿ ವಜಾ ಮಾಡಿ, ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.