ಬೆಂಗಳೂರು: , ಪೇಸಿಎಂ ಟೀ ಶರ್ಟ್ ಧರಿಸಿದ್ದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಬೀದಿ ಗೂಂಡಾ ರೀತಿ ಹಲ್ಲೆಗೈದ ಪೊಲೀಸ್ ಅಧಿಕಾರಿಯ ಕೃತ್ಯ ಖಂಡನೀಯ. ಈ ಪುಂಡ ಪೋಲಿಸನನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪೇಸಿಎಂ ಟೀ ಶರ್ಟ್ ಧರಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಥಾ ಮುಖ್ಯಮಂತ್ರಿ, ತಥಾ ಪೊಲೀಸ್. ಕರ್ನಾಟಕದಲ್ಲಿ ಯುಪಿ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಪೊಲೀಸರು ಅದನ್ನು ಅನುಷ್ಠಾನಗೊಳಿಸಲು ಹೊರಟಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ವಿರುದ್ಧದ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ಧಮ್ಮು-ತಾಕತ್ ಬಿಜೆಪಿ ಪಕ್ಷಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದೆ ಬಿಜೆಪಿ ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಅಭಿಯಾನ ಅಪರಾಧ ಎಂದು ಯಾವ ಕಾನೂನಿನಲ್ಲಿ ಹೇಳಿದೆ? ಮುಖ್ಯಮಂತ್ರಿ ಅವರೇ, ನಮ್ಮ ವಿರುದ್ಧ ಕೊಳಕು ಭಾಷೆಯ ಜಾಹೀರಾತು ನೀಡಿದ್ದೀರಿ, ಅದನ್ನು ನಾವು ಹರಿದುಹಾಕಲು ಹೋಗುವುದಿಲ್ಲ. ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಟ್ವೀಟಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ಪೊಲೀಸರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಶುರುಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಜನರೇ ಪೊಲೀಸರ ವಿರುದ್ಧ ತಿರುಗಿ ಬೀಳುವಂತಹ ಪರಿಸ್ಥಿತಿಯನ್ನು ದಯವಿಟ್ಟು ಸೃಷ್ಟಿ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಶಾಂತಿಪ್ರಿಯರ ನಾಡು, ಇದನ್ನು ಪೊಲೀಸ್ ರಾಜ್ಯ ಮಾಡಲು ಹೋಗಬೇಡಿ. ಯಾವ ಸರ್ಕಾರವೂ ಶಾಶ್ವತ ಅಲ್ಲ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾದೀತು ಎಂದು ತಿಳಿಸಿದ್ದಾರೆ.