ಹುಬ್ಬಳ್ಳಿ: ಸುಲಿಗೆ ಮತ್ತು ಮನೆ ದರೋಡೆಯನ್ನೆ ವೃತ್ತಿಯಾಗಿಸಿಕೊಂಡಿದ್ದ ಕದೀಮನನ್ನು ಉಪನಗರ ಪೊಲೀಸರು ಗುರುವಾರ ತಡರಾತ್ರಿ ಇಲ್ಲಿನ ಎಂಟಿಎಸ್ ಕಾಲೋನಿಯಲ್ಲಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ನೇಕಾರನಗರದ ಸೋನು ಊರ್ಫ್ ಅರುಣ ನಾಯ್ಕ ಬಂಧಿತನಾದವ. ಈತನ ಮೇಲೆ 13ಕ್ಕೂ ಹೆಚ್ಚು ದರೋಡೆ, ಸುಲಿಗೆ ಪ್ರಕರಣಗಳಿವೆ.
ಈತನು ಬುಧವಾರ ರಾತ್ರಿ ಆಟೋರಿಕ್ಷಾದಲ್ಲಿ ಓರ್ವರನ್ನು ಕರೆದುಕೊಂಡು ಹೋಗಿ ಹಣ, ಮೊಬೈಲ್ ಇತರೆ ವಸ್ತು ದೋಚಿಕೊಂಡು ಹೋಗಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ, ತನ್ನೊಂದಿಗೆ ಇನ್ನಿಬ್ಬರು ಇದ್ದಾರೆ ಎಂದು ಎಂಟಿಎಸ್ ಕಾಲೋನಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಮಲ್ಲಪ್ಪ ಎಸ್. ಹೂಗಾರ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ತಡೆಯಲು ಯತ್ನಿಸಿದ್ದಾರೆ. ಆದರೂ ತನ್ನ ಆಟೋಪಟಾಟ ಮುಂದುವರಿಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಿ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಪಡಿಸಿದ್ದಾರೆ. ಕಿರಾತನಕನ ಹಲ್ಲೆಯಿಂದಾಗಿ ಹೆಡ್ ಕಾನ್ಸಟೇಬಲ್ ಡಿ.ಆರ್. ಪಮ್ಮಾರ ಮತ್ತು ಕಾನ್ಸಟೇಬಲ್ ತರುಣ ಗಡ್ಡದವರ ಗಾಯಗೊಂಡಿದ್ದು, ಅವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳ ಮತ್ತು ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶುಕ್ರವಾರ ಬೆಳಗ್ಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸಿಬ್ಬಂದಿಯ ಕಾರ್ಯ ಶ್ಲಾಘಿಸಿದ್ದಾರೆ.