ಮನೆ ಸುದ್ದಿ ಜಾಲ ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಶೇ 75.04ರಷ್ಟು ಮತದಾನ

ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಶೇ 75.04ರಷ್ಟು ಮತದಾನ

0

ಮೈಸೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಸಾರ್ವತ್ರಿಕ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಶೇ 75.04ರಷ್ಟು ಮತದಾನವಾಗಿದೆ.

Join Our Whatsapp Group

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ಬಿಜೆಪಿ ಮುಖಂಡ ವಿ.ಸೋಮಣ್ಣ ಸೇರಿದಂತೆ 143 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಮೇ 13ರಂದು ಹೊರಬೀಳಲಿರುವ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ.

ಪ್ರಜಾತಂತ್ರದ ಹಬ್ಬದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡರು. ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು. ಸಂಜೆ 6ರೊಳಗೆ ಸರದಿ ಸಾಲಿನಲ್ಲಿದ್ದವರಿಗೆ ಮಾತ್ರ ಮಾತ್ರ ಮತದಾನಕ್ಕೆ ಅವಕಾಶ ಕೊಡಲಾಯಿತು. ನಿಗದಿತ ಸಮಯ ಮುಗಿಯುತ್ತಿದ್ದಂತೆಯೇ ಮತಗಟ್ಟೆಗಳ ಬಾಗಿಲು ಬಂದ್ ಮಾಡಲಾಯಿತು. ಹಕ್ಕು ಚಲಾಯಿಸಿದವರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಮತಗಟ್ಟೆ ಸಿಬ್ಬಂದಿ ಹಾಕಿದರು.

ಕೆ.ಆರ್.ನಗರದಲ್ಲಿ ಅತಿ ಹೆಚ್ಚು ಅಂದರೆ ಶೇ 85.1ರಷ್ಟು ಮತದಾನವಾಗಿದೆ. ನಂತರದ ಸ್ಥಾನದಲ್ಲಿ ‍ಪಿರಿಯಾಪಟ್ಟಣ (ಶೇ 84.42), ವರುಣ (ಶೇ 84.39), ಹುಣಸೂರು (ಶೇ 82.16), ನಂಜನಗೂಡು (ಶೇ 80.67) ಕ್ಷೇತ್ರಗಳಿವೆ. ಉಳಿದಂತೆ ಎಚ್‌.ಡಿ.ಕೋಟೆಯಲ್ಲಿ ಶೇ 79.85, ತಿ.ನರಸೀಪುರದಲ್ಲಿ ಶೇ 78.77, ಚಾಮುಂಡೇಶ್ವರಿಯಲ್ಲಿ ಶೇ 74.05ರಷ್ಟು ಮತದಾನವಾಗಿದೆ. ಚಾಮರಾಜ (ಶೇ 61.12) ಹಾಗೂ ನರಸಿಂಹರಾಜ (ಶೇ 63.44) ಹಾಗೂ ಕೃಷ್ಣರಾಜ (ಶೇ 59.34) ಕೊನೆಯ ಸ್ಥಾನದಲ್ಲಿವೆ.

ಕೆಲವೆಡೆ ತಾಂತ್ರಿಕ ತೊಂದರೆ:

ಜಿಲ್ಲೆಯಲ್ಲಿ 2,905 ಮತಗಟ್ಟೆಗಳಲ್ಲಿ 3,156 ಅಧ್ಯಕ್ಷಾಧಿಕಾರಿಗಳು, 3,250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ 6,352 ಮತದಾನಾಧಿಕಾರಿಗಳು ಕಾರ್ಯನಿರ್ವಹಿಸಿದರು. 600 ಕೇಂದ್ರ ಸರ್ಕಾರಿ ಅಧಿಕಾರಿ, ನೌಕರರನ್ನು ಮೈಕ್ರೋಅಬ್ಸರ್ವರ್‌’ಗಳು ಕೆಲಸ ಮಾಡಿದರು.

ಈ ಚುನಾವಣೆಗೆ 5,620 ಬ್ಯಾಲೆಟ್‌ ಯುನಿಟ್, 3,936 ಕಂಟ್ರೋಲ್ ಯುನಿಟ್ ಹಾಗೂ 4,266 ವಿ.ವಿ.ಪ್ಯಾಟ್‌’ಗಳನ್ನು ಬಳಸಲಾಯಿತು. ಅಲ್ಲಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವನ್ನು ತಾಂತ್ರಿಕ ಸಿಬ್ಬಂದಿ ಸರಿಪಡಿಸಿದರು. ಇದಕ್ಕಾಗಿ ಕೆಲವೆಡೆ ಮತದಾನವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಉಳಿದಂತೆ ಹೆಚ್ಚಿನ ಗೊಂದಲ–ಗದ್ದಲ ನಡೆದ ಬಗ್ಗೆ ವರದಿಯಾಗಿಲ್ಲ.

905 ಮತಗಟ್ಟೆಗಳಲ್ಲಿ 1,597 ಮತಗಟ್ಟೆಗಳಲ್ಲಿ ವೆಬ್‌’ಕಾಸ್ಟಿಂಗ್‌ (ನೇರ‍ಪ್ರಸಾರ)ಗೆ ವ್ಯವಸ್ಥೆ ಮಾಡಲಾಗಿತ್ತು. 574 ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ನರಸಿಂಹರಾಜದಲ್ಲಿ ಅತಿ ಹೆಚ್ಚು ಎಂದರೆ 78 ಮತಗಟ್ಟೆಗಳು, ಚಾಮುಂಡೇಶ್ವರಿಯಲ್ಲಿ 68 ಹಾಗೂ ವರುಣದಲ್ಲಿ 52 ಮತಗಟ್ಟೆಗಳಲ್ಲಿ ಜಾಸ್ತಿ ನಿಗಾ ವಹಿಸಲಾಗಿತ್ತು. ಅತಿ ಹೆಚ್ಚು ಅಂದರೆ ತಲಾ 17 ಅಭ್ಯರ್ಥಿಗಳು ಕಣದಲ್ಲಿದ್ದ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ತಲಾ ಎರಡು ವಿದ್ಮುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ಕಣದಲ್ಲಿರುವ ಅಭ್ಯರ್ಥಿಗಳು, ಅವರ ಚಿಹ್ನೆಗಳ ಬಗ್ಗೆ ಮಾಹಿತಿಯನ್ನು ಮತಗಟ್ಟೆಗಳಲ್ಲಿನ ಗೋಡೆಗಳಲ್ಲಿ ಅಂಟಿಸಲಾಗಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಭದ್ರತಾ ಕೊಠಡಿ ಸೇರಿದ ಇವಿಎಂಗಳು

ಮತದಾನ ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ– ಕಂಟ್ರೋಲ್‌ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ.ಮಸ್ಟರಿಂಗ್ ಸ್ಥಳದಿಂದ ನಗರದ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ.

ಭದ್ರತಾ ಕೊಠಡಿಗೆ 3 ಸುತ್ತಿನ ಭದ್ರತೆ ಒದಗಿಸಲಾಗಿದೆ. 1ನೇ ಭದ್ರತೆಯನ್ನು ಸಿ.ಎ.ಪಿ.ಎಫ್ ತುಕಡಿಯಿಂದ, 2ನೇ ಸಶಸ್ತ್ರ ಮೀಸಲು ಪಡೆಯು, 3ನೇ ಹಂತದಲ್ಲಿ ಸ್ಥಳೀಯ ಪೊಲೀಸರಿಂದ ಭದ್ರತೆ ಒದಗಿಸಲಾಗುವುದು. ಅಲ್ಲದೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು ಹಾಗೂ ಭದ್ರತಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಲಾಗ್‌ಬುಕ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ನಗರದಲ್ಲಿ ಮತದಾನ ಕಡಿಮೆ

ಹಕ್ಕು ಚಲಾಯಿಸುವುದರಲ್ಲಿ ಗ್ರಾಮೀಣರೇ ಮೊದಲಿದ್ದರೆ, ಸುಶಿಕ್ಷಿತರು ಎನಿಸಿಕೊಂಡಿರುವ ನಗರ ಪ್ರದೇಶದ ಮತದಾರರೇ ಕೊನೆಯ ಸ್ಥಾನದಲ್ಲಿದ್ದಾರೆ.

ನಗರದಲ್ಲಿ ಮತದಾನ ಪ್ರಮಾಣವನ್ನು ಶೇ 75ಕ್ಕಾದರೂ ಏರಿಸಬೇಕು ಎಂಬ ಜಿಲ್ಲಾಡಳಿತದ ಗುರಿಗೆ ನಗರವಾಸಿಗಳಿಂದ ಸ್ಪಂದನೆ ಸಿಕ್ಕಿಲ್ಲ.  ಜಿಲ್ಲಾಡಳಿತದಿಂದ ಹಲವು ದಿನಗಳಿಂದ ನಡೆಸಿದ್ದ ಸ್ವೀಪ್‌ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಚಟುವಟಿಕೆಗಳ ಹೊರತಾಗಿಯೂ ನಗರದ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ.