ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ 8,730 ಮತದಾರರು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ.
ಚುನಾವಣೆ ಆಯೋಗದ ಆದೇಶದಂತೆ ಪ್ರಥಮ ಬಾರಿಗೆ ಮನೆಯಿಂದ ಮತದಾನ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಆಯ್ಕೆ ಪಡೆದ ಮತದಾರರ ಮನೆಯಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ಬಿಬಿಎಂಪಿ ಪ್ರತಿನಿಧಿಗಳು ನಿರ್ಮಿಸಲಿದ್ದಾರೆ.
ಮೇ 10ರ ಮತದಾನದ ದಿನದಿಂದ ನಾಲ್ಕೈದು ದಿನ ಮೊದಲೇ ಮತ ಚಲಾಯಿಸಬಹುದು. ಮನೆಯಿಂದ ಮತದಾನ ಆಯ್ಕೆ ಪಡೆದುಕೊಂಡವರಲ್ಲಿ 8,611 ಮಂದಿ 80 ವರ್ಷಕ್ಕೂ ಮೇಲಿನವರಾಗಿದ್ದಾರೆ. 119 ಅಂಗವಿಕಲರಿದ್ದಾರೆ.
ಈ ಆಯ್ಕೆ ಪಡೆಯಲು ಏ.17 ಕಡೆ ದಿನವಾಗಿತ್ತು. ಎಲ್ಲ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದ ಮೇಲೆ ಒಟ್ಟು ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 2.36 ಲಕ್ಷ ಮಂದಿ 80 ವರ್ಷಕ್ಕೂ ಮೇಲ್ಟಟ್ಟವರಿದ್ದಾರೆ. ರಾಜ್ಯದಲ್ಲಿ ಈ ಸಂಖ್ಯೆ 12 ಲಕ್ಷವಾಗಿದೆ.