ಬೆಂಗಳೂರು(Bengaluru): ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವವರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಹಾಕಬಹುದು. ಅರ್ಜಿಗೆ ₹5 ಸಾವಿರ ಶುಲ್ಕ. ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು ₹2 ಲಕ್ಷ ಡಿಡಿ, ಕಾಂಗ್ರೆಸ್ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ. 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ ಎಂದರು.
2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದರು.
ಸದಸ್ಯತ್ವ ನೋಂದಣಿ ಆರಂಭ:
ಹಲವು ಮಂದಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಆನ್ಲೈನ್ ಮೂಲಕ ನೋಂದಣಿ ಆರಂಭಿಸಿದ್ದೇವೆ. ಕೆಲವು ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದು, ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಈಗ ಬಹಿರಂಗ ಪಡಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅರ್ಜಿ ಹಾಕಿದ ನಂತರ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಿದೆ ಎಂದು ಡಿಕೆಶಿ ತಿಳಿಸಿದರು.
ಮೊದಲ ಬಾರಿಗೆ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಭೇಟಿ ಕೊಟ್ಟು ಬಳಿಕ ಉಳಿದ ರಾಜ್ಯಗಳಿಗೆ ಹೋಗಲಿದ್ದಾರೆ. ನವೆಂಬರ್ 6ರಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ವಿಮಾನ ನಿಲ್ದಾಣದಲ್ಲಿ ಖರ್ಗೆ ಅವರನ್ನು ಸ್ವಾಗತಿಸಲಿದ್ದಾರೆ ಎಂದು ಮಾಹಿತಿ ನೀಡಿದರು.