ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಲ್ಕನೇ ಪಟ್ಟಿಯನ್ನು (ಏಳು ಅಭ್ಯರ್ಥಿಗಳು) ಕಾಂಗ್ರೆಸ್ ಮಂಗಳವಾರ ರಾತ್ರಿ ಪ್ರಕಟಿಸಿದೆ.
ಪಕ್ಷವು ಈವರೆಗೆ ಒಟ್ಟು 216 ಕ್ಷೇತ್ರಗಳಿಗೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿದ್ದು, ಎಂಟು ಕ್ಷೇತ್ರಗಳಿಗೆ ಇನ್ನಷ್ಟೇ ಪ್ರಕಟಿಸಬೇಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರಕ್ಕೆ ಮೊಹಮ್ಮದ್ ಯೂಸುಫ್ ಸವಣೂರು ಅವರನ್ನು ಹುರಿಯಾಳುವನ್ನಾಗಿ ಮಾಡಿದೆ.
ಲಿಂಗಸುಗೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಪಕ್ಷ ಮಣೆ ಹಾಕಿದೆ. ಆದರೆ, ಹರಿಹರದಲ್ಲಿ ಶಾಸಕ ಎಂ. ರಾಮಪ್ಪ ಅವರಿಗೆ ಟಿಕೆಟ್ ನಿರಾಕರಿಸಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಹುಬ್ಬಳ್ಳಿ–ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅವರಿಗೆ ಸೋಮವಾರವೇ ಬಿ–ಫಾರಂ ವಿತರಿಸಲಾಗಿತ್ತು.
ಶ್ರವಣಬೆಳಗೊಳದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರಿಗೆ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ಒಲಿದಿದೆ.
ಸಿ.ಟಿ.ರವಿ ಆಪ್ತ ವಲಯದಲ್ಲಿದ್ದ ತಮ್ಮಯ್ಯ ಅವರು ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಅಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾದ ಕೂಡಲೇ ಕೈ ಪಾಳಯಕ್ಕೆ ಜಿಗಿದಿದ್ದರು. ಈ ಹಿಂದಿನ ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಮುಸ್ಲಿಂ ಅಭ್ಯರ್ಥಿಯನ್ನು ಪಕ್ಷವು ಕಣಕ್ಕೆ ಇಳಿಸಿತ್ತು. ಈ ಸಲ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಹುರಿಯಾಳುವನ್ನಾಗಿ ಮಾಡಲು ಪಕ್ಷದ ವಲಯದಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು. ಆದರೆ, ಪಕ್ಷವು ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ಯಾವೆಲ್ಲ ಕ್ಷೇತ್ರಗಳು ಬಾಕಿ: ಪುಲಕೇಶಿ ನಗರ, ಸಿ.ವಿ. ರಾಮನ್ ಗರ, ಮುಳಬಾಗಿಲು, ರಾಯಚೂರು ನಗರ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ.ಆರ್ ಪುರ.
ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ?
ಲಿಂಗಸುಗೂರು-ದುರ್ಗಪ್ಪ ಎಸ್.ಹೂಲಗೇರಿ
ಹುಬ್ಬಳ್ಳಿ – ಧಾರವಾಡ ಕೇಂದ್ರ ಕ್ಷೇತ್ರ- ಜಗದೀಶ್ ಶೆಟ್ಟರ್
ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರ -ದೀಪಕ್ ಚಿಂಚೋರೆ
ಶಿಗ್ಗಾಂವಿ-ಮೊಹಮ್ಮದ್ ಯೂಸುಫ್ ಸವಣೂರು
ಹರಿಹರನಂದಗಾವಿ – ಶ್ರೀನಿವಾಸ
ಚಿಕ್ಕಮಗಳೂರು-ಹೆಚ್.ಡಿ.ತಮ್ಮಯ್ಯ
ಶ್ರವಣಬೆಳಗೊಳ- ಎಂ.ಎ.ಗೋಪಾಲಸ್ವಾಮಿ