ಮನೆ ರಾಜಕೀಯ ವಿಧಾನಸಭಾ ಚುನಾವಣೆ: ಇನ್ನೂ 20 ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ನಳಿನ್‌ ಕುಮಾರ್ ಕಟೀಲ್‌

ವಿಧಾನಸಭಾ ಚುನಾವಣೆ: ಇನ್ನೂ 20 ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ನಳಿನ್‌ ಕುಮಾರ್ ಕಟೀಲ್‌

0

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನೂ 20 ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಚಾರ ನಡೆಸಲು ಬರಲಿದ್ದಾರೆ ಎಂದರು.

ಎರಡು ದಿನ ನಡೆದ ಜಿಲ್ಲಾ ಕೋರ್‌ ಕಮಿಟಿ ಸಭೆಗಳಲ್ಲಿ ಯಾವುದೇ ಕ್ಷೇತ್ರದ ಬಗ್ಗೆ ಅಸಮಾಧಾನ ಕೇಳಿ ಬರಲಿಲ್ಲ. ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ ಬಹುಮತ ಸಿಗುವುದು ಖಚಿತ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಗೆಲುವಿನ ರೂವಾರಿ ನಿರ್ವಹಣಾ ಸಮಿತಿಯೇ ಆಗಲಿದೆ. ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲುವಿಗಾಗಿ ಶ್ರಮಿಸಲು ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ. ಕಳೆದ ಮೂರು ತಿಂಗಳಲ್ಲಿ 4 ಕೋಟಿ ಜನರನ್ನು ಸಂಪರ್ಕಿಸಿರುವುದಾಗಿ ಹೇಳಿದರು.

ಅಭ್ಯರ್ಥಿಯಾಗಿ ಯಾರನ್ನೇ ಕಣಕ್ಕೆ ಇಳಿಸಿದರೂ ಎಲ್ಲರೂ ಅವರ ಗೆಲುವಿಗಾಗಿ ಶ್ರಮಿಸಬೇಕು ಎಂದು ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.

ನಿರ್ದಿಷ್ಟ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಕೆಲಸ ಮಾಡುತ್ತೇವೆ ಎಂಬ ಭಾವನೆ ಬೇಡ. ಯಾರಿಗೆ ಕೊಟ್ಟರೂ ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂಬ ಧ್ಯೇಯ ಇರಲಿ ಎಂದು ಸಲಹೆ ಮಾಡಿದರು.