ಮೈಸೂರು: ವಿಧಾನಸಭೆ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಬಿದ್ದಿದ್ದು ಎಸ್‌ಯುಸಿಐಸಿ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್) ಪಕ್ಷದ ಪಿ.ಎಸ್.ಸಂಧ್ಯಾ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಪಕ್ಷದ ಜಿಲ್ಲಾ ಸಮಿತಿಯಿಂದ ರಾಮಸ್ವಾಮಿ ವೃತ್ತದಿಂದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ನಗರಪಾಲಿಕೆ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
ಎಸ್’ಯುಸಿಐಸಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿ, ರಾಜಕೀಯ ಹಾಗೂ ರಾಜಕಾರಣಿಗಳೆಂದರೆ ಅಸಹ್ಯ ಪಡುವಂತಹ ಪರಿಸ್ಥಿತಿ ನಮ್ಮ ಮುಂದಿದೆ. ಆದರೆ, ರಾಜಕೀಯವನ್ನು ಜನರ ವಿಮೋಚನೆಗಾಗಿ ಹೋರಾಡುವ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಿದೆ. ಈ ಕೆಲಸವನ್ನು ನಮ್ಮ ಪಕ್ಷವು ಮಾಡುತ್ತಿದೆ. ಅಧಿಕಾರದ ರಾಜಕೀಯಕ್ಕೆ ಪರ್ಯಾಯವಾಗಿ ಹೋರಾಟದ ರಾಜಕೀಯವನ್ನು ನಮ್ಮ ಪಕ್ಷ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ ಎಂದರು.
ಪಕ್ಷದ ಅಭ್ಯರ್ಥಿ ಪಿ.ಎಸ್.ಸಂಧ್ಯಾ 28 ವರ್ಷಗಳಿಂದ ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರ ಚಳವಳಿಗೆ ನಾಯಕತ್ವ ನೀಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದು, ಪ್ರಸ್ತುತ ಜನ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾರ್ಮಿಕರು, ಜನಸಾಮಾನ್ಯರು ಹಾಗೂ ರೈತರ ಪರವಾಗಿ ಹೋರಾಡುವ ಅಭ್ಯರ್ಥಿಗಳನ್ನು ಜನರು ಬೆಂಬಲಿಸಬೇಕು ಎಂದು ಕೋರಿದರು.
ಜನಸಾಮಾನ್ಯರ ಜೀವನ ಸುಧಾರಣೆಗಾಗಿ ಮತದಾರರ ನನ್ನನ್ನು ಬೆಂಬಲಿಸಬೇಕು ಎಂದು ಸಂಧ್ಯಾ ಮನವಿ ಮಾಡಿದರು.
ಜಿಲ್ಲಾ ಸಮಿತಿಯ ಎಂ.ಉಮಾದೇವಿ, ಚಂದ್ರಶೇಖರ ಮೇಟಿ, ವಿ.ಯಶೋಧರ, ಸೀಮಾ ಜಿ.ಎಸ್., ಹರೀಶ್, ಸುನೀಲ್, ಸುಮಾ, ಸುಭಾಷ್, ಚಂದ್ರಕಲಾ, ಪುಷ್ಪಾ, ಅಭಿಲಾಷ ಮತ್ತು ನೀತು ಇದ್ದರು.