ಬೆಂಗಳೂರು: ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಅಂಗೀಕಾರ ಮಾಡಲಾಗಿದೆ. ಬಗರ್ ಹುಕುಂ ಸಮಿತಿಯಲ್ಲಿ ಸದಸ್ಯರಾಗಿ ಇರಲು ಇಚ್ಚೆ ಇಲ್ಲದ ಶಾಸಕರ ಕ್ಷೇತ್ರಗಳಲ್ಲಿ ಬೇರೆಯವರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲು ಅವಕಾಶ ಮಾಡಿಕೊಡುವ ವಿಧೇಯಕವನ್ನು ಕೂಡ ಅಂಗೀಕರಿಸಲಾಗಿದೆ. ಕಳೆದ ವರ್ಷ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದ್ದು, ಭೂಕಂದಾಯ ಕಾಯ್ದೆ ಸೆಕ್ಷನ್ 95, 96ಕ್ಕೆ ತಿದ್ದುಪಡಿ ತರುವ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಪ್ರಕ್ರಿಯೆ ಸರಳೀಕರಣವಾಗಿತ್ತು.
ಭೂ ಕಂದಾಯ (ತಿದ್ದುಪಡಿ) ವಿಧೇಯಕದ ಮಾಹಿತಿ
ಕರ್ನಾಟಕ ಭೂ ಕಂದಾಯ ಅಥವಾ ಭೂ ಪರಿವರ್ತನೆ ವಿಧೇಯಕದಲ್ಲಿ ಕೃಷಿಯೇತರ ಉದ್ದೇಶಗಳಿಗಾಗಿ ಮಾಡಲಾಗಿರುವ ಭೂಮಿಯನ್ನು ಆ ಮಾಸ್ಟರ್ ಪ್ಲಾನ್ನಲ್ಲಿ ಉಲ್ಲೇಖಿಸಿರುವ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿರುವುದಿಲ್ಲ.
ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಭೂಮಿಯನ್ನು ಪರಿವರ್ತನೆ ಮಾಡಿಕೊಳ್ಳಲು ಅರ್ಜಿದಾರರು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿಯು 30 ದಿನಗಳೊಳಗೆ ಆದೇಶವನ್ನು ನೀಡದಿದ್ದರೆ, ಭೂ- ಪರಿವರ್ತನೆಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆಡಳಿತದಲ್ಲಿನ ವಿಳಂಬ ಮತ್ತು ಜನರ ಸುಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಈ ವಿಧೇಯ ಮಹತ್ವ ಪಡೆದುಕೊಂಡಿದೆ.
ಈ ತಿದ್ದುಪಡಿಯನ್ನು ತರುವುದು ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೃಷಿಭೂಮಿಯ ನಿವಾಸಿಗಳು ಅದನ್ನು ಸಂಪೂರ್ಣವಾಗಿ ಅಥವಾ ಅದರ ಭಾಗವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬೇರೆಡೆಗೆ ವರ್ಗಾವಣೆಗೆ ಬಯಸಿದರೆ, ಅವರು ಅರ್ಜಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಅಫಿಡವಿಟ್ ನ್ನು ಸಲ್ಲಿಸಬಹುದು. ಬಳಿಕ ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಜಿಲ್ಲಾಧಿಕಾರಿ ಅನುಮೋದನೆ ನೀಡಲಾಗುತ್ತದೆ.