ಸಕ್ಷಮ ನ್ಯಾಯಾಲಯ ಒಮ್ಮೆ ಅನುಸೂಚಿತ ಅಪರಾಧ ರದ್ದುಪಡಿಸಿದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಅಪರಾಧದಿಂದ ಗಳಿಸಿದ ಆದಾಯ ಅಥವಾ ಅಪರಾಧ ಚಟುವಟಿಕೆಯಿಂದ ಪಡೆದ ಆಸ್ತಿ ಎಂದು ಪರಿಗಣಿಸಲಾಗದು ಎಂಬುದಾಗಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ .
ಅನುಸೂಚಿತ ಇಲ್ಲವೇ ಪ್ರೆಡಿಕೇಟ್ ಅಫೆನ್ಸ್ (ಪಿಎಂಎಲ್‌ಎ ಕಾಯಿದೆಯ ಅನುಸೂಚಿತ ಪಟ್ಟಿಯಡಿ ಪ್ರಕರಣ ದಾಖಲಿಸಲು ಕಾರಣವಾಗುವ ಮೂಲ ಐಪಿಸಿ ಪ್ರಕರಣ) ಎಂಬುದು ದೊಡ್ಡ ಅಪರಾಧದ ಒಂದು ಭಾಗವಾಗಿದ್ದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರಂಭವಾಗುವ ಅಕ್ರಮ ಹಣ ವರ್ಗಾವಣೆ ರೀತಿಯ ಅಪರಾಧವನ್ನು ಪ್ರೆಡಿಕೇಟ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತದೆ.
ಅನುಸೂಚಿತ ಅಪರಾಧ ಮತ್ತು ಅದರಿಂದ ಪಡೆದ ಆಸ್ತಿ ಅಕ್ರಮ ಹಣ ವರ್ಗಾವಣೆ ಅಪರಾಧದ ಅಡಿಪಾಯವಾಗಿದ್ದು ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಿಡುಗಡೆ ಇಲ್ಲವೇ ಖುಲಾಸೆಗೊಳಿಸಿದ್ದಾಗ ಆ ತಳಹದಿಯೇ ಇಲ್ಲವಾಗಿಬಿಡುತ್ತದೆ ಎಂದು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ತಿಳಿಸಿದ್ದಾರೆ.
ಇದರೊಂದಿಗೆ ಪಿಎಂಎಲ್‌ಎ ಪ್ರಕಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಕಾನೂನುಬದ್ಧವಾಗಿ ಅಪರಾಧ ಚಟುವಟಿಕೆಯಿಂದ ಪಡೆದ ಆಸ್ತಿ ಎಂದು ಇಲ್ಲವೇ ಕ್ರಿಮಿನಲ್ ಚಟುವಟಿಕೆಯಿಂದ ಗಳಿಸಿದ ಆಸ್ತಿ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ನುಡಿದಿದೆ.
ಹಿಂದಿನ ಅಪರಾಧದಲ್ಲಿ ಖುಲಾಸೆಗೊಳಿಸುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಮಾತ್ರಕ್ಕೆ ಆರೋಪಿ ಕ್ರಿಮಿನಲ್ ಮೊಕದ್ದಮೆಗಳ ಘೋರ ಶಿಕ್ಷೆ ಅಥವಾ ಪಿಎಂಎಲ್‌ಎ ಅಡಿ ಆಸ್ತಿ ಜಪ್ತಿಯ ನೋವನುಭವಿಸಬೇಕು ಎಂದರ್ಥವಲ್ಲ ಎಂಬುದಾಗಿ ಅದು ಹೇಳಿದೆ.
ಜಾರಿ ನಿರ್ದೇಶನಾಲಯ (ಇ ಡಿ) ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಬಿಡುಗಡೆಗೊಳಿಸಿದ ಮತ್ತು ಅವರ ಚರ ಹಾಗೂ ಸ್ತಿರಾಸ್ತಿ ಮರಳಿಸುವಂತೆ ಸೂಚಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಪೀಠ ಈ ಅವಲೋಕನಗಳನ್ನು ಮಾಡಿದೆ.














