ಮನೆ ರಾಜಕೀಯ ಭಾರತದಿಂದ ಶ್ರೀಲಂಕಾಗೆ ನೆರವು: 76 ಸಾವಿರ ಟನ್ ಇಂಧನ ಪೂರೈಕೆ

ಭಾರತದಿಂದ ಶ್ರೀಲಂಕಾಗೆ ನೆರವು: 76 ಸಾವಿರ ಟನ್ ಇಂಧನ ಪೂರೈಕೆ

0

ಹೊಸದಿಲ್ಲಿ(New delhi): ನೆರೆಯ ದೇಶ ಶ್ರೀಲಂಕಾ (Shrilanka) ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದು, ದೇಶದ ಆಂತರಿಕ ಆರ್ಥಿಕತೆಯನ್ನು ಸ್ಥಿರಗೊಳಿಸಲು ಹಾಗೂ ಅದರ ತುರ್ತು ಅಗತ್ಯಗಳಿಗೆ ನೆರವಾಗಲು ಭಾರತ ಇಂಧನ ರವಾನೆ ಮಾಡುತ್ತಿದೆ.

ಶ್ರೀಲಂಕಾಕ್ಕೆ ಕಳೆದ 24 ಗಂಟೆಗಳಲ್ಲಿ ಒಟ್ಟು 76,000 ಟನ್ ಇಂಧನವನ್ನು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಭಾರತದ ನೆರವಿನೊಂದಿಗೆ ಲಂಕಾಕ್ಕೆ ಕಳುಹಿಸಲಾದ ಒಟ್ಟು ಇಂಧನವು 2,70,000 ಟನ್‌ಗಳಿಗೂ ಅಧಿಕವಾಗಿದೆ.

22 ಮಿಲಿಯನ್ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರದಲ್ಲಿ ಜನರು ಆಹಾರ, ಇಂಧನ ಮತ್ತು ಇತರೆ ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿದ್ದಾರೆ.

ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ಅತ್ಯಂತ ಘೋರ ಸನ್ನಿವೇಶ ಎದುರಿಸುತ್ತಿರುವ ತಮ್ಮ ದೇಶಕ್ಕೆ ಮಾನವೀಯತೆಯ ನೆರವು ಒದಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಜಯಸೂರ್ಯ ಮಾತನಾಡಿ, ನೆರೆಯವರಾಗಿ ಮತ್ತು ನಮ್ಮ ದೇಶದ ಅಣ್ಣನಾಗಿ, ಭಾರತವು ನಮಗೆ ಯಾವಾಗಲೂ ಸಹಾಯ ಮಾಡುತ್ತಿದೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ನಮಗೆ ಈಗಿನ ಸನ್ನಿವೇಶದಲ್ಲಿ ಬದುಕುಳಿಯುವುದು ಸುಲಭವಾಗಿಲ್ಲ. ಭಾರತ ಮತ್ತು ಇತರೆ ದೇಶಗಳ ನೆರವಿನಿಂದ ಇದರಿಂದ ಹೊರಗೆ ಬರುತ್ತೇವೆ ಎಂದು ಆಶಿಸುತ್ತೇವೆ” ಎಂದು ಹೇಳಿದ್ದಾರೆ.