ಬೆಂಗಳೂರು: ಸಹಾಯಕ ಗ್ರಂಥಪಾಲಕರ ವೇತನದಲ್ಲಿ ತಾರತಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪಾಲಿಸದ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ತಪ್ಪೆಸಗಿದ ಅಧಿಕಾರಿಗಳಿಂದ ದಂಡ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಸರ್ಕಾರಿ ಗ್ರಂಥಪಾಲಕರ ವೇತನಕ್ಕಿಂತ ಕಡಿಮೆ ಪಾವತಿ ಮಾಡಿರುವ ಹಿನ್ನೆಲೆಯಲ್ಲಿ ತಾರತಮ್ಯ ಸರಿಪಡಿಸಲು ಹೈಕೋರ್ಟ್ ಆದೇಶಿಸಿದ್ದರೂ ಪಾಲಿಸಿರಲಿಲ್ಲ. ಈ ಸಂಬಂಧ ವಿ.ಎ.ನಾಗಮಣಿ ಎಂಬುವರು ನ್ಯಾಯಾಂಗ ನಿಂದನೆ ದಾಖಲಿಸಿದ್ದರು. ಇದೀಗ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ಕೋರ್ಟ್ ನೀಡುವ ಆದೇಶಗಳನ್ನು ಪಾಲಿಸದೇ ತಮಾಷೆ ನೋಡುತ್ತಿದ್ದೀರಾ? ಕೋರ್ಟ್‌ಗೆ ಬರುವುದು ಜನರಿಗೆ ಸಂತಸದ ವಿಚಾರವಲ್ಲ. ಪಾರ್ಕ್‌ಗಳಿಗೆ ಹೋಗಿ ಜನರನ್ನು ಕೇಳಿನೋಡಿ ಕೋರ್ಟ್ ಹಾಗೂ ಸರ್ಕಾರದ ಬಗ್ಗೆ ಜನರು ಏನು ಹೇಳುತ್ತಾರೆ ಕೇಳಿ. ವಿಳಂಬ ವ್ಯವಸ್ಥೆಯ ಬಗ್ಗೆ ಜನರಿಗೆ ಅಸಮಾಧಾನವಿದೆ ಎಂದು ಸರ್ಕಾರದ ನಡೆಗೆ ಹೈಕೋರ್ಟ್ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಕೃಷ್ ದೀಕ್ಷಿತ್ ರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ 3 ವಾರಗಳಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ತಾಕೀತು ಮಾಡಿದೆ.