ಚಿಕ್ಕೋಡಿ: ಅಥಣಿ ಪುರಸಭೆ ಮುಖ್ಯ ಅಧಿಕಾರಿ ಹಾಗೂ ವಕೀಲರ ನಡುವೆ ಹೊಡೆದಾಟ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಗೋಡಿಮನಿ ವಕೀಲ ಮಿತೇಶ್ ಪಟ್ಟಣ ಪುರಸಭೆ ಕಚೇರಿ ಒಳಗೆ ಗುರುವಾರ ಸಂಜೆ ಪರಸ್ಪರ ಹೊಡೆದಾಡಿಕೊಂಡು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಮಿತೇಶ್ ಪಟ್ಟಣ ಮಾತನಾಡಿ, ಒಂದು ಅರ್ಜಿ ವಿಚಾರವಾಗಿ ಮೂರು ಜನ ವಕೀಲರ ಜೊತೆಯಾಗಿ ಪುರಸಭೆ ಕಚೇರಿ ಮುಖ್ಯ ಅಧಿಕಾರಿ ಅಶೋಕ ಗೋಡಿಮನಿಯವರನ್ನು ಸಂಪರ್ಕಿಸಿದೆವು. ನಾವು ಕಚೇರಿಯಲ್ಲಿ ಮುಖ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಿದ್ದಂತೆ, ನಿಮ್ಮಂತ ವಕೀಲರನು ನಾನು ತುಂಬಾ ಜನ ನೋಡಿದ್ದೇನೆ. ನೀವು ಯಾವ ಅರ್ಜಿ ಬಗ್ಗೆ ವಿಚಾರ ಮಾಡೋಕೆ ಇಲ್ಲಿ ಬರುತ್ತೀರಿ. ಎಂದು ಅವಾಚ್ಯ ಪದಗಳಿಂದ ನಮ್ಮನ್ನು ನಿಂದಿಸಿ, ನಮ್ಮ ಮೇಲೆ ಹಲ್ಲೆ ಮಾಡಲು ಬಂದರು. ಈ ಹಿಂದೆ ನಾವು ಅಥಣಿಯಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಜಾಗದ ತೆರವು ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಜಿತ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಇದುವರೆಗೆ ಅರ್ಜಿಯನ್ನು ಮುಖ್ಯಾಧಿಕಾರಿ ಕೈಗೊತ್ತಿಕೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಕಾನೂನಿನ ಮೊರೆ ಹೋಗಿದ್ದೆವು. ಮತ್ತೊಂದು ಅರ್ಜಿ ವಿಚಾರವಾಗಿ ನಾವು ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಆ ವಿಚಾರವನ್ನು ಇಟ್ಟುಕೊಂಡು ಮುಖ್ಯಾಧಿಕಾರಿ ನಮ್ಮ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗೋಡಿಮನಿ ಸಾರ್ವಜನಿಕ ಕೆಲಸವನ್ನು ಮಾಡುವುದು ಬಿಟ್ಟು ಭ್ರಷ್ಟಾಚಾರ ಬಗ್ಗೆ ಕೇಳಿದ್ದಕ್ಕೆ ಈಗಾಗಲೇ ಐದು ಜನರ ಮೇಲೆ ದೂರು ದಾಖಲು ಮಾಡಿದ್ದಾರೆ. ಓರ್ವ ಸರ್ಕಾರಿ ಅಧಿಕಾರಿ ಜನಸಾಮಾನ್ಯರ ಕೆಲಸ ಮಾಡುವುದು ಬಿಟ್ಟು ಎಫ್ ಐ ಆರ್ ಎಂಬ ಅಸ್ತ್ರವನ್ನು ಬಳಸಿ ಇಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗೋಡಿಮನಿ ಮಾತನಾಡಿ, ಮಧ್ಯಾಹ್ನ ನನ್ನ ಕಚೇರಿಯಲ್ಲಿ ಇದ್ದೆ. ಮೂರು ಜನ ವಕೀಲರು ನನ್ನ ಕಚೇರಿಗೆ ಬಂದರು. ಕಳೆದ ವರ್ಷ ಅರ್ಜಿ ಕೊಡಲಾಗಿತ್ತು ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ತೆರವು ಕಾರ್ಯಾಚರಣೆ ಇರುವುದರಿಂದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರಿಗೆ ತಿಳಿಸುತ್ತಿದ್ದಂತೆ, ಅತಿಕ್ರಮ ತೆರವು ಆದಷ್ಟು ಬೇಗ ಮಾಡಬೇಕು. ಇಲ್ಲವಾದರೆ ನಾನು ನಿನ್ನನ್ನು ಬಿಡುವುದಿಲ್ಲ. ನಾನು ಹೇಳಿದಂಗೆ ನೀನು ಕೆಲಸ ಮಾಡಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿದ್ದಾರೆ.
ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರಿಂದ ಪ್ರತಿಭಟನೆ: ಪುರಸಭೆ ಮುಖ್ಯಾಧಿಕಾರಿ ಅಶೋಕ ಗೋಡಿಮನಿ ಅವರ ಮೇಲಿನ ಹಲ್ಲೆ ಖಂಡಿಸಿ ಇಂದು ಪೌರಕಾರ್ಮಿಕರು ಪೌರ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಅಲ್ಲದೆ, ಅಥಣಿ ಪಟ್ಟಣದಲ್ಲಿ ನೀರು ಸರಬರಾಜು, ಒಳಚರಂಡಿ ಸ್ವಚ್ಛತೆ, ಮನೆ ಮನೆಗೆ ಹೋಗಿ ಕಸ ಸ್ವಚ್ಛತೆ, ಬೀದಿ ದೀಪ, ಪುರಸಭೆ ವ್ಯಾಪ್ತಿಯ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಹಾಗೂ ತುರ್ತಾಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪುರಸಭೆ ಕಚೇರಿ ಎದುರು ನ್ಯಾಯಕ್ಕಾಗಿ ಪ್ರತಿಭಟನೆಗೆ ನಡೆಸುತ್ತಿದ್ದಾರೆ.