ಬರ್ಮಿಂಗ್ ಹ್ಯಾಮ್(Birmingham): ಅಥ್ಲೆಟಿಕ್ಸ್ ನಲ್ಲಿ ಕ್ರಮವಾಗಿ ಮಹಿಳೆಯರ 20 ಕಿ.ಮೀ. ನಡಿಗೆ ಹಾಗೂ ಪುರುಷರ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಮತ್ತು ಅವಿನಾಶ್ ಸಬ್ಳೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಶನಿವಾರ ನಡೆದ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ 43 ನಿ. 38.83 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದುಕೊಂಡರು. ಈ ಹಾದಿಯಲ್ಲಿ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಮಯವನ್ನೂ ದಾಖಲಿಸಿದರು.
ಆಸ್ಟ್ರೇಲಿಯಾದ ಜೆಮಿಮಾ ಮಾಂಟಗ್ (42 ನಿ. 34.30 ಸೆ.) ಚಿನ್ನ ಗೆದ್ದರೆ, ಕೆನ್ಯಾದ ಎಮಿಲಿ ವಾಮುಸಿ (43 ನಿ. 50.86 ಸೆ.) ಕಂಚು ಪಡೆದರು.
ಕಾಮನ್‌ವೆಲ್ತ್ ಕೂಟದ ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಗೌರವ ಪ್ರಿಯಾಂಕಾ ಅವರಿಗೆ ಒಲಿಯಿತು. ಹರ್ಮಿಂದರ್ ಸಿಂಗ್ ಅವರು 2010ರ ನವದೆಹಲಿ ಕಾಮನ್‌ವೆಲ್ತ್ ಕೂಟದ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು.
ಆದರೆ ಮಹಿಳೆಯರ ವಿಭಾಗದಲ್ಲಿ ಯಾರೂ ಇದುವರೆಗೆ ಪದಕ ಗೆದ್ದಿರಲಿಲ್ಲ.
ಅವಿನಾಶ್ ಸಬ್ಳೆ ಅವರು ಸ್ಟೀಪಲ್ ಚೇಸ್‌ನಲ್ಲಿ 8 ನಿ. 11.20 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು (8 ನಿ. 12.48ಸೆ.) ಉತ್ತಮಪಡಿಸಿಕೊಂಡರು.
ಕೆನ್ಯಾದ ಅಬ್ರಹಾಂ ಕಿಬಿವೊಟ್ (8 ನಿ. 11.15 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಅಮೊಸ್ ಸೆರೆಮ್ (8 ನಿ. 16.83 ಸೆ.) ಕಂಚು ಪಡೆದುಕೊಂಡರು.
ಅಥ್ಲೆಟಿಕ್ಸ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ನಾಲ್ಕಕ್ಕೇರಿದೆ.