ಮಹಾರಾಷ್ಟ್ರ: ಎಟಿಎಂ ದೋಚಲು ದರೋಡೆಕೋರರು ನಡೆಸಿದ ಯತ್ನವೊಂದು ವಿಫಲವಾಗಿದ್ದು, ಪರಿಣಾಮ ಎಟಿಎಂನಲ್ಲಿದ್ದ ಸುಮಾರು 21 ಲಕ್ಷ ರೂ.ನಗದು ಸುಟ್ಟು ಭಸ್ಮವಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಜನವರಿ 13 ರ ಮುಂಜಾನೆ ಡೊಂಬಿವಲಿ ಟೌನ್ ಶಿಪ್ ನ ವಿಷ್ಣು ನಗರ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ನ ಎಟಿಎಂನಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರದ ಬೀಗ ಮುರಿದು ಹಣ ದೋಚುವ ಯತ್ನ ಮಾಡಿದೆ ಆದರೆ ಅದು ಫಲಿಸದ ಕಾರಣ ತಾವು ತಂದ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರದ ಬಾಗಿಲನ್ನು ಮುರಿಯಲು ಯತ್ನಿಸಿದ್ದಾರೆ ಆದರೆ ಬೆಂಕಿಯ ಕಿಡಿ ಒಳಗಿರುವ ಹಣದ ಕಂತೆಗೆ ತಗುಲಿದೆ ಪರಿಣಾಮ ಒಳಗಿನಿಂದ ಹಣ ಹೊತ್ತಿ ಉರಿಯಲು ಆರಂಭಿಸಿದೆ. ದರೋಡೆಕೋರರು ಯಂತ್ರವನ್ನು ಗ್ಯಾಸ್ ಕಟ್ಟರ್ ಮೂಲಕ ತೆರೆಯುವಷ್ಟರಲ್ಲಿ ಒಳಗಿದ್ದ ಹಣದ ಕಂತೆಗಳು ಸುಟ್ಟು ಭಸ್ಮವಾಗಿತ್ತು.
ಬೆಂಕಿಯಿಂದ ಯಂತ್ರಕ್ಕೆ ಹಾನಿಯಾಗಿದ್ದು ಇದರೊಳಗೆ ಇದ್ದ ಸುಮಾರು 21,11,800 ರೂ. ಸುಟ್ಟು ಭಸ್ಮವಾಗಿದೆ. ಎಟಿಎಂ ಕೇಂದ್ರವನ್ನು ನಿರ್ವಹಿಸುವ ಜವಾಬ್ದಾರಿಯುತ ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಮ್ಸ್ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 457, 380, ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.