ಶ್ರೀರಂಗಪಟ್ಟಣ: ಹೈಕೋರ್ಟ್ ನ ತಾತ್ಕಾಲಿಕ ಆದೇಶದ ಮೇರೆಗೆ ತನ್ನ ಜಮೀನಿಗೆ ಅತಿಕ್ರಮ ಪ್ರವೇಶ ನಿಷೇಧ ಬೋರ್ಡ್ ಹಾಕಲು ತೆರಳಿದ್ದ ಜಮೀನಿನ ಮಾಲೀಕ ಹಾಗೂ ಆತನೊಂದಿಗೆ ತೆರಳಿದ್ದ ವಕೀಲರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ಘಟನೆ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ತಾಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮದ ಭರತ್ ಎ.ಪಿ(30)ಹಲ್ಲೆಗೆ ಒಳಗಾದ ಯುವಕ.
ಭರತ್ ಎ ಪಿ, ಈ ಗ್ರಾಮದ ಸರ್ವೆ ನಂ,152ರ ಸಂಬಂಧ ಹೈಕೋರ್ಟ್ ನಲ್ಲಿ ಪ್ರಕರಣ(W-p-20435/2024 ) ದಾಖಲಿಸಿದ್ದು, ಹೈಕೋರ್ಟ್ ನಲ್ಲಿ ತಾತ್ಕಾಲಿಕ ನಿಬಂಧನೆ ಆದೇಶ ನೀಡಿದ್ದಾರೆ.
ಈ ಹಿನ್ನಲೆ ಇದೇ ತಿಂಗಳ 22 ರಂದು ಸಂಜೆ ಸದರಿ ಜಾಗದಲ್ಲಿ ಅತಿಕ್ರಮ ಪ್ರವೇಶ ನಿಷೇಧದ ಬೋರ್ಡ್ ಹಾಕಿದ್ದು, ಈ ವೇಳೆ ಊರಿನ ಕೆಲ ಗ್ರಾಮಸ್ಥರು ನನ್ನ ಮೇಲೆ ಕಲ್ಲಿನಿಂದ ಹೊಡೆದು, ಕೈನಿಂದ ಹಲ್ಲೆ ಮಾಡಿ, ಕಾಲಿನಿಂದ ತುಳಿದಿದ್ದಾರೆ. ಕುತ್ತಿಗೆಯ ಆಭರಣವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಮಾತ್ರವಲ್ಲದೇ ನನ್ನ ಮನೆಯ ಸಿಸಿಟಿವಿ ಕ್ಯಾಮೆರಾವನ್ನು ಕಿತ್ತು ಹಾಕಿ, ಕುಟುಂಬಕ್ಕೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದರ್ಶನ್ (ಜಾನಿ), ಲೋಕೇಶ್ ಕೆ., ರಮೇಶ್, ರವಿಲಕ್ಷ್ಮಣ, ಸದಾ(ಕಡತನಾಳು), ನಾರಾಯಣ, ನಾಗರಾಜು, ನಾಗಣ್ಣ, ವಿಶ್ವೇಶ್ವರ ಎಂ, ಸದಾಶಿವ, ಬೋರೇಗೌಡ, ನಾರಾಯಣ, ಹರೀಶ ಮತ್ತು ಇತರರು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ಮುಂದೆ ನನಗೆ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ರೀತಿಯ ಅಪಘಾತ, ಪ್ರಾಣಾಹಾನಿ, ವಸ್ತುನಾಶ, ಕಳ್ಳತನ ಸಂಭವಿಸಿದಲ್ಲಿ ಇವರೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ವಿವಾದ ?
ಕೆ. ಶೆಟ್ಟಿಹಳ್ಳಿ ಹೋಬಳಿ ಅಚ್ಚಪ್ಪನಕೊಪ್ಪಲು ಗ್ರಾಮದ ಸರ್ವೆ ನಂಬರ್ 152 ರ ಜಾಗವು ಅಚ್ಚಪ್ಪನಕೊಪ್ಪಲಿನ ಆಂಜನೇಯ ದೇವಸ್ಥಾನದ ಪುರೋಹಿತರಾದ ಪ್ರಸನ್ನ ಅವರ ಮಗನಾದ ಭರತ್ ಎಪಿ ಎಂಬುವರ ಹೆಸರಿನಲ್ಲಿ ಆರ್ ಟಿ ಸಿ ಯು ಚಾಲ್ತಿಯಲ್ಲಿರುತ್ತದೆ.
ಗ್ರಾಮಸ್ಥರು ಈ ಜಾಗವು ಊರಿನವರಿಗೆ ಸೇರಬೇಕು. ಈ ಜಾಗವನ್ನು ಅಂದಿನ ಕಾಲದಲ್ಲಿ ನಮ್ಮ ಹಿರಿಯರು ಪುರೋಹಿತರಿಗೆ ದಾನ ನೀಡಿರುವುದಾಗಿ ಆಧಾರ ರಹಿತ ಆರೋಪಿಸಿ ಬಿಟ್ಟು ಕೊಡುವಂತೆ ಭರತ್ ಎಪಿ ಅವರಿಗೆ ತುಂಬಾ ತಿಂಗಳಿಂದ ಒತ್ತಾಯಿಸಿರುತ್ತಾರೆ. ಭರತ್ ಎಪಿ ರವರನ್ನು ಈ ಕುರಿತು ವಿಚಾರಿಸಿದಾಗ ಈ ಜಾಗವು 64 ವರ್ಷದ ಹಿಂದೆಯೇ ನಮ್ಮ ತಾತ ವೆಂಕಟಸುಬ್ಬ ಜೋಯಿಸ್ ರವರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಬಂದಾಗ ಅವರ ಹೆಸರಿಗೆ ಖಾತೆ ಮಾಡಿಸಿಕೊಂಡಿರುತ್ತಾರೆ. ತದನಂತರ ಅವರ ತಾತ ತಮ್ಮನ ಮಗನಾದ ಬಿ ಎಸ್ ಪ್ರಸನ್ನ ರವರ ಹೆಸರಿಗೆ ಮರಣ ಶಾಸನ ಪತ್ರ ಮುಖಾಂತರ ಖಾತೆ ವರ್ಗಾವಣೆ ಮಾಡಿರುತ್ತಾರೆ. ನಂತರ ನಮ್ಮ ತಂದೆ ಬಿ ಎಸ್ ಪ್ರಸನ್ನರವರು 2 ವರ್ಷದ ಹಿಂದೆ ನನಗೆ ದಾನ ಪತ್ರ ಮುಖಾಂತರ ಕಾನೂನಿನ ಪ್ರಕಾರವೇ ಖಾತೆ ಬದಲಾವಣೆ ಮಾಡಿಸಿಕೊಂಡಿರುತ್ತೇನೆ. ಈ ವಿಚಾರವು ಗ್ರಾಮಸ್ಥರಿಗೆ ತಿಳಿದು ಹಲವು ಬಾರಿ ಪಂಚಾಯಿತಿ ವ್ಯಾಪ್ತಿಯಲ್ಲಿ ತಕರಾರು ತೆಗೆದಿರುತ್ತಾರೆ.
ಇದರಿಂದ ಮನನೊಂದು ಈ ಸರ್ವೆ ನಂಬರಿನ ದಾಖಲೆಗಳನ್ನು ಹಿಡಿದು ಹೈಕೋರ್ಟ್ ಮೆಟ್ಟಿಲೇರಿರುತ್ತೇನೆ. ಹೈಕೋರ್ಟ್ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ w-p- 20435/2024 ಪ್ರಕರಣವನ್ನು ದಾಖಲಿಸಿಕೊಂಡು ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ಬಂದ ಬಳಿಕ ಆದೇಶವನ್ನು ಸರ್ವೆ ನಂ.152 ನೆ ಜಾಗದಲ್ಲಿ ಆದೇಶ ಪ್ರತಿಯನ್ನು ಮಂಗಳವಾರ ಸಂಜೆ ಲಗತ್ತಿಸಲು ಪ್ರಯತ್ನಿಸಿದಾಗ ಊರಿನ ಗ್ರಾಮಸ್ಥರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೊತೆಯಲ್ಲಿ ಬಂದಿದ್ದ ಮೈಸೂರಿನ ವಕೀಲರ ಜೊತೆಗೆ ಸಹ ಅಸಭ್ಯ ವರ್ತನೆ ತೋರಿದ್ದಾರೆ.
ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಅಲ್ಲದೇ ಹೈಕೋರ್ಟ್ ನಿಂದ ಅಥವಾ ಸುಪ್ರೀಂ ಕೋರ್ಟ್ ನಿಂದ ತೀರ್ಪು ತಂದರೂ, ಈ ಜಾಗದಲ್ಲಿ ಗ್ರಾಮಸ್ಥರ ಹಾಗೂ ಶಾಸಕರ ತೀರ್ಮಾನಕ್ಕೆ ಮಾತ್ರ ಆದ್ಯತೆ ಎಂದು ಗ್ರಾಮಸ್ಥರು ಬೆದರಿಸಿದ್ದಾರೆ. ಆದೇಶ ಪ್ರತಿ ಲಗತಿಸಿದ್ದ ಬೋಡನ್ನು ಸ್ವತಃ ಗ್ರಾಮಸ್ಥರೇ ತೆರವು ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಭರತ್ ಎ ಪಿ ತಿಳಿಸಿರುತ್ತಾರೆ.
ನ್ಯಾಯಕ್ಕಾಗಿ ಮೊರೆ ಇಟ್ಟಿರುವ ಭರತ್ ಎ ಪಿ, ಶ್ರೀರಂಪಟ್ಟಣ ಪೊಲೀಸರು ಗ್ರಾಮಸ್ಥರಿಗೆ ಪರ ವಹಿಸಿದ್ದು, ನನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.