ಬೆಳಗಾವಿ(Belagavi): ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆರೋಪಿ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದು, ಈ ಸಂದರ್ಭ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ರಸ್ತೆ ಕಳೆದ ಮೂರು ತಿಂಗಳ ಹಿಂದೆ (ಮಾರ್ಚ್ 15ರಂದು) ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಅವರನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರಾಜು ಕೊಲೆಯಲ್ಲಿ ಈಗಾಗಲೇ ನಾಲ್ಕೈದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ನೇತೃತ್ವದ ಪೊಲೀಸ್ ಸಿಬ್ಬಂದಿಯು ಇಂದು ಬೆಳಗಿನ ಜಾವ 3.30ಕ್ಕೆ ಕೊಲೆ ಆರೋಪಿ ವಿಶಾಲ್‌ಸಿಂಗ್ ಚೌಹಾಣ್ ಎಂಬುವವರನ್ನು ಬೆಳಗಾವಿಯ ವೀರಭದ್ರೇಶ್ವರ ನಗರದ ಕೋಯ್ಲಾ ಹೋಟೆಲ್ ಬಳಿ ಬಂಧಿಸಲು ತೆರಳಿತ್ತು.
ಈ ವೇಳೆ ಎಸಿಪಿ ಮತ್ತವರ ತಂಡದ ಮೇಲೆ ಮಾರಕಾಸ್ತ್ರಗಳಿಂದ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ರೌಡಿಶೀಟರ್ ವಿಶಾಲ್‌ಸಿಂಗ್ ಬಂಧಿಸುವ ವೇಳೆ ಸಿಸಿಬಿ ಪೊಲೀಸ್ ಪೇದೆ ಯಾಸೀನ್ ನದಾಫ್ ಎಡಗೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿ ಪರಾರಿಗೆ ಯತ್ನಿಸಿದ್ದನು. ಆಗ ಎಸಿಪಿ ನಾರಾಯಣ ಭರಮನಿ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ವಿಶಾಲ್ ಸಿಂಗ್ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಆರೋಪಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಎಸಿಪಿ ನಾರಾಯಣ ಭರಮಣಿ, ಇಬ್ಬರು ಸಿಪಿಐ, ಒಬ್ಬ ಪಿಎಸ್ಐ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ.. ಆರೋಪಿ ವಿಶಾಲ್‌ಸಿಂಗ್ ಮೇಲೆ ಕರ್ನಾಟಕ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ಮೂರು ತಿಂಗಳಿಂದ ವಿಶಾಲ್ ಸಿಂಗ್ ತಲೆಮರೆಸಿಕೊಂಡಿದ್ದರು.
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.