ಮಂಗಳೂರು(ದಕ್ಷಿಣ ಕನ್ನಡ): ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ಯಾರೇಜಾನ್ @ ಸೇಟು (37 ವರ್ಷ), ಬದ್ರುದ್ದೀನ್ @ ಬದ್ರು (28 ವರ್ಷ), ರಾಜೇಶ್.ಆರ್ (22 ವರ್ಷ) ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಪಂಪ್ ವೆಲ್ ಬಳಿಯ ಖಾಸಗಿ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ದಸ್ತಗಿರಿ ಮಾಡಿದ ಮೂರು ಆರೋಪಿತರಿಂದ 1,57,50,000 ರೂ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ
1) 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್)-( 1,57,50,000/-)
2) REDMI ಕಂಪನಿಯ ಮೊಬೈಲ್ ಫೋನ್ -1 (10,000/-)
3) ಕೆಎ-25-MG-0625 ನೇ ಸಿಲ್ವರ್ ಬಣ್ಣದ ಸ್ವಿಪ್ಟ್-1 (5,00,000/-)
4) MOTOROLA ಕಂಪನಿಯ ಮೊಬೈಲ್ ಫೋನ್ -1 (10,000/-)
5) REDMI ಕಂಪನಿಯ ಮೊಬೈಲ್ ಫೋನ್ -1 (10,000/-)
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ/- 1,62,80,000/-ರೂ ಆಗಬಹುದು.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.