ಬೆಂಗಳೂರು: ಚಿತ್ತಾಪುರದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣ ತೀವ್ರ ರಾಜಕೀಯ ತಾಕೀತಿಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿ ಬಿಜೆಪಿ ವಿಧಾನ ಪರಿಷತ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸಚಿವ ಪ್ರಿಯಾಂಕ್ ಖರ್ಗೆಯ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಎಂಎಲ್ಸಿ ಕೆ.ಎಸ್. ನವೀನ್ ಸೇರಿದಂತೆ ಹಲವರು, ಈ ಘಟನೆ ಸಂಬಂಧ ಸರ್ಕಾರದ ನಿರ್ಲಕ್ಷ್ಯ ಹಾಗೂ ಪ್ರಿಯಾಂಕ್ ಖರ್ಗೆಯ ಬೆಂಬಲಿಗರ ಗುಂಡಾ ವರ್ತನೆ ವಿರುದ್ಧ ಕಿಡಿಕಾರಿದರು. “ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಮೇಲೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದು, ಇದು ನಿಂದನೀಯ. ಈ ಘಟನೆಗೆ ಸರ್ಕಾರ, ಡಿಸಿಎಂ ಹಾಗೂ ಗೃಹ ಸಚಿವರ ನೇರ ಹೊಣೆಗಾರಿಕೆ ಇದೆ. ಅವರು ಮತ್ತು ಪ್ರಿಯಾಂಕ್ ಖರ್ಗೆಯ ವಿರುದ್ಧ ಹಕ್ಕುಚ್ಯುತಿ ಹಾಗೂ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಬೇಕು” ಎಂದು ನವೀನ್ ಒತ್ತಾಯಿಸಿದರು.
ಈ ಸರ್ಕಾರದಲ್ಲಿ ವಿಪಕ್ಷ ನಾಯಕರು, ಶಾಸಕರಿಗೆ ರಕ್ಷಣೆ ಇಲ್ಲ. ಗೂಂಡಾ ರಾಜ್ಯವನ್ನು ಈ ಸರ್ಕಾರ ಮಾಡ್ತಿದೆ. ಛಲವಾದಿ ನಾರಾಯಣಸ್ವಾಮಿ ನಾನ್ನುಡಿಯ ಮಾತು ಹೇಳಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಪ್ರಿಯಾಂಕ್ ಬೆಂಬಲಿಗರು ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ಪೊಲೀಸರೇ ಈ ಗೂಂಡಾಗಳಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಹಿಂದೆ ನಾಯಿ ಅನ್ನೋ ಪದ ಬಳಕೆ ಮಾಡಿದ್ರು. ಪ್ರಧಾನಿಗಳನ್ನ ವಿಷ ಸರ್ಪ ಎಂದು ಕರೆದಿದ್ದರು. ಆಗ ಯಾರು ನಮ್ಮ ಕಾರ್ಯಕರ್ತರು ಹೀಗೆ ನಡೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗ್ತಿದೆ. ಸಂವಿಧಾನದ ಪುಸ್ತಕ ಹಿಡಿಯೋ ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ತನಿಖೆ ಆಗಿ ಕ್ರಮ ಆಗೋವರೆಗೂ ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆ ಅವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.














