ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಇರಾಕೋಡು ಎಂಬಲ್ಲಿ ಇಂದು ಬೆಳಿಗ್ಗೆ ಗಂಭೀರ ಘಟನೆ ನಡೆದಿದೆ. ಪಿಕಪ್ ವಾಹನ ಚಾಲಕ ಹನೀಫ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವಂತ ಘಟನೆ ನಡೆದಿದೆ. ಈ ಯತ್ನದಲ್ಲಿ ಚಾಲಕ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗುತ್ತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹನೀಫ್ ತನ್ನ ವಾಹನ ನಿಲ್ಲಿಸಿ ಮರಳು ಅನ್‌ಲೋಡ್ ಮಾಡುತ್ತಿದ್ದ ಸಂದರ್ಭದಲ್ಲೇ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆತನ ಮೇಲೆ ದಾಳಿ ಮಾಡಿದ್ದಾರೆ. ಹನೀಫ್ ತಕ್ಷಣವೇ ಆತ್ಮರಕ್ಷಣೆಗಾಗಿ ಓಡಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹನೀಫ್ ಜೊತೆಗಿದ್ದ ರಹೀಮ್ ಎಂಬಾತನ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಸುದ್ದಿ ತಿಳಿದು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನದ ಕುರಿತು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.














