ಮನೆ ಅಪರಾಧ ಕೊಲೆ ಯತ್ನ: ಡಿವೈಎಸ್ಪಿಗೆ ಶ್ರೀಧ‌ರ್ ಪೂಜಾ‌ರ್ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

ಕೊಲೆ ಯತ್ನ: ಡಿವೈಎಸ್ಪಿಗೆ ಶ್ರೀಧ‌ರ್ ಪೂಜಾ‌ರ್ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

0

ಬೆಂಗಳೂರು: ಪೊಲೀಸ್ ಅಧಿಕಾರಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಡಿವೈಎಸ್ಪಿ ಶ್ರೀಧ‌ರ್ ಪೂಜಾ‌ರ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 56ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.

ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಡಿವೈಎಸ್ಪಿ ಶ್ರೀಧ‌ರ್ ಪೂಜಾ‌ರ್ ಬಂಧಿಸಲು ಎಸ್‌ಐಟಿ ಮುಂದಾಗಿತ್ತು. ಈ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀಧರ್ ಪೂಜಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

2020ರಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಗ ಇನ್‌ ಸ್ಪೆಕ್ಟರ್‌ಗಳಾಗಿದ್ದ ಶ್ರೀದರ್ ಕೆ ಪೂಜಾರ್, ಲಕ್ಷ್ಮಿಕಾಂತಯ್ಯ ಹಾಗೂ ಚಂದ್ರಾದರ್ ವಿರುದ್ಧ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಪ್ರಕರಣದ ದಾಖಲಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಅಕ್ರಮವಾಗಿ ಬಂಧಿಸಿ ಕ್ರಿಪ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪ ಇವರ ಮೇಲೆ ಕೇಳಿಬಂದಿತ್ತು.

ಕಳೆದ ತಿಂಗಳು 27ರಂದು ಸಿಟಿ ಸಿವಿಲ್‌ ಕೋರ್ಟ್‌ ಸಮೀಪ ಡಿವೈಎಸ್ಪಿ ಶ್ರೀಧ‌ರ್ ಪೂಜಾ‌ರ್ ಇರುವ ಬಗ್ಗೆ ಮಾಹಿತಿ ತಿಳಿದು ಬಂಧಿಸಲು ಹೋಗಿದ್ದ ಇನ್‌ ಸ್ಪೆಕ್ಟರ್ ಅನಿಲ್ ಕುಮಾ‌ರ್, ಎಎಸ್‌ ಐ ಭಾಸ್ಕ‌ರ್ ನೇತೃತ್ವದ ತಂಡದ ಮೇಲೆ ಕಾರು ನುಗ್ಗಿಸಿ ಪರಾರಿಯಾಗಿದ್ದರು. ಘಟನೆ ಸಂಬಂಧ ಎಎಸ್‌ಐ ಭಾಸ್ಕ‌ರ್ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿತ್ತು. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಡಿವೈಎಸ್ಪಿ ಶ್ರೀಧ‌ರ್ ಪೂಜಾ‌ರ್ ಕೋರ್ಟ್ ಮೆಟ್ಟಿಲೇರಿದ್ದರು.

ನಾಪತ್ತೆಯಾಗಿರುವ ಶ್ರೀಧ‌ರ್ ಪೂಜಾ‌ರ್ ಬಂಧನಕ್ಕೆ ನಗರದ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಆರೋಪಿ ಡಿವೈಎಸ್ಪಿ ಇರುವಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ ಅಥವಾ ಹಿಡಿದು ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಆರೋಪಿ ಬಗ್ಗೆ ಮಾಹಿತಿ ಸಿಕ್ಕರೆ ದೂರವಾಣಿ ಸಂಖ್ಯೆ-080 22094485/22094498, ಹಾಗೂ ಮೊಬೈಲ್ ಸಂಖ್ಯೆ 9480800181, 944819915 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಸಿಐಡಿ ಪ್ರಕಟಣೆಯಲ್ಲಿ ತಿಳಿಸಿದೆ.