ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಗೈರಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯನವರೇ, ಕಲ್ಬುರ್ಗಿಯಲ್ಲಿ ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ. ಅಂದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ತಿರಸ್ಕೃತಗೊಂಡಿರುವ ಬಗ್ಗೆ ಸಾಕ್ಷಿ ಕಲೆಹಾಕಲು ಯಾತ್ರೆ ನಡೆಸಬೇಕೆಂದಿರಲಿಲ್ಲ ಎಂದು ಲೇವಡಿ ಮಾಡಿದೆ.
ನಾಡಭಾಷೆ ಕನ್ನಡವನ್ನು ತಿರಸ್ಕರಿಸಿ ಉರ್ದುವಿನಲ್ಲೇ ಭಾಷಣ ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್ ಕುಸಿಯುತ್ತಿರುವುದು, ಹುಂಬತನ ಪ್ರದರ್ಶಿಸುತ್ತಿರುವುದು ಅಚ್ಚರಿಯೇನಲ್ಲ. ಇಷ್ಟಕ್ಕೂ ಪ್ರಜಾದ್ರೋಹ ಯಾತ್ರೆಯ ಸಭೆಗಳಲ್ಲಿ ಸೇರುತ್ತಿದ್ದ ಅಪಾರ ಪ್ರಮಾಣದ ‘ಖಾಲಿ ಕುರ್ಚಿ’ಗಳಿಗೆ ಯಾವ ಭಾಷೆಯಲ್ಲಿ ಸಂಬೋಧಿಸಿದರೇನು ಎಂದು ಬಿಜೆಪಿ ಪ್ರಶ್ನಿಸಿದೆ.