ನ್ಯೂಯಾರ್ಕ್(Newyork): ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಅವರ ಯಕೃತ್ತು ಸಹ ಹಲ್ಲೆಯಿಂದ ಹಾನಿಗೊಳಗಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅವರ ಏಜೆಂಟ್ ಆಂಡ್ರ್ಯೂ ವೈಲಿ, ಮುಂಬೈ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರನ್ನು ವೆಂಟಿಲೇಟರ್‌ನಲ್ಲಿರಿಸಲಾಗಿದ್ದು, ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಅವರ(ಸಲ್ಮಾನ್ ರಶ್ದಿ) ಆರೋಗ್ಯದ ಕುರಿತಾಗಿ ಒಳ್ಳೆಯ ಸುದ್ದಿಗಳು ಬರುತ್ತಿಲ್ಲ. ಸಲ್ಮಾನ್ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ತೋಳಿನ ನರಗಳು ತುಂಡಾಗಿವೆ ಮತ್ತು ಅವರ ಯಕೃತ್ತು ಇರಿತದಿಂದ ಹಾನಿಗೊಳಗಾಗಿದೆ ಎಂದು ತಿಳಿಸಿದ್ದಾರೆ.
`ದಿ ಸೆಟನಿಕ್ ವರ್ಸಸ್’ಕೃತಿ ಬರೆದ ನಂತರ ಹಲವು ವರ್ಷಗಳಿಂದ ಇಸ್ಲಾಮಿಸ್ಟ್‌ಗಳಿಂದ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದ ರಶ್ದಿ, ಪಶ್ಚಿಮ ನ್ಯೂಯಾರ್ಕ್ ರಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 24 ವರ್ಷದ ನ್ಯೂಜೆರ್ಸಿ ನಿವಾಸಿಯಿಂದ ಇರಿತಕ್ಕೊಳಗಾಗಿದ್ದರು.
ರಶ್ದಿಯನ್ನು ಇರಿದ ಆರೋಪಿಯನ್ನು ನ್ಯೂಜೆರ್ಸಿಯ ಫೇರ್‌ವ್ಯೂನ ಹದಿ ಮತರ್ (24) ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸ್‌ನ ಮೇಜರ್ ಯುಜಿನ್ ಸ್ಟಾನಿಸ್ಜೆವ್ಸ್ಕಿ ತಿಳಿಸಿದ್ದರು.
ನೈಋತ್ಯ ನ್ಯೂಯಾರ್ಕ್ ರಾಜ್ಯದ ಚೌಟಕ್ವಾ ಸಂಸ್ಥೆಯ ವೇದಿಕೆಯಲ್ಲಿದ್ದ ರಶ್ದಿ (75) ಅವರ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿತ್ತು.ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಪ್ರೇಕ್ಷಕರಲ್ಲಿ ಇದ್ದ ಒಬ್ಬ ವೈದ್ಯರು ರಶ್ದಿ ಅವರಿಗೆ ಚಿಕಿತ್ಸೆ ನೀಡಿದರು ಎಂದು ಸ್ಟಾನಿಸ್ಜೆವ್ಸ್ಕಿ ಹೇಳಿದರು.
ರಶ್ದಿಯವರಿಗೆ ವೈದ್ಯರು ತಕ್ಷಣವೇ ಪ್ರಥಮ ಚಿಕಿತ್ಸೆ ಆರಂಭಿಸಿದರು. ಬಳಿಕ, ಲೇಖಕರನ್ನು ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.