ಮೈಸೂರು: ಮೊಬೈಲ್ ಆ್ಯಪ್ ಆಧರಿತ ವೈಟ್ ಬೋರ್ಡ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳಿಗೆ ಅವಕಾಶ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಆಟೊ ಚಾಲಕರು ಹಾಗೂ ಮಾಲೀಕರು ಸೋಮವಾರ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಆಟೊಗಳೊಂದಿಗೆ ಜಮಾಯಿಸಿದ ಪ್ರತಿಭಟನಕಾರರು, ಬಿಜೆಪಿ ಸರ್ಕಾರ ಬಂಡವಾಳಶಾಹಿ ಪರವಾಗಿದೆ. ಬಡವರು, ಅಸಂಘಟಿತ ವಲಯದ ಕಾರ್ಮಿಕರ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಆಟೊ ಚಾಲಕರು ಮತ್ತು ಮಾಲೀಕರ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಎಂ.ಲಕ್ಷ್ಮಿನಾರಾಯಣ, ಟ್ಯಾಕ್ಸಿ ಸೇವೆಯನ್ನು ಆ್ಯಪ್ ಮೂಲಕ ಅಕ್ರಮ ನೀಡುತ್ತಿರುವ ಕಂಪನಿಗಳಿಗೆ ಅನುಮತಿ ನೀಡದಂತೆ ಕಳೆದ ಮೂರು ವರ್ಷದಿಂದ ನಿರಂತರ ಹೋರಾಟ ನಡೆಸಿದರೂ ಸರ್ಕಾರದ ಕಿವಿ ಕೇಳಿಸುತ್ತಿಲ್ಲ. ಈ ಮೂಲಕ ಬಂಡವಾಳಶಾಹಿ ಪರವೆಂದು ಸಾಬೀತು ಮಾಡಿದೆ ಎಂದು ಕಿಡಿಕಾರಿದರು.
ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ 7 ಲಕ್ಷ ಆಟೊ ಚಾಲಕರು ಹಾಗೂ ಕುಟುಂಬ ಬೀದಿಗಿಳಿದು ಕ್ರಾಂತಿ ನಡೆಸಬೇಕಾಗುತ್ತದೆ. ತೆರಿಗೆ, ವಿಮಾ ಶುಲ್ಕ ಸೇರಿದಂತೆ ಯಾವುದೇ ಮಾದರಿಯ ತೆರಿಗೆಯನ್ನು ಆಟೊ ಚಾಲಕರು ಇನ್ನು ಭರಿಸುವುದಿಲ್ಲ. ಕಾನೂನು ಉಲ್ಲಂಘಿಸಿ ಜೈಲಿಗೆ ಹೋಗಲೂ ಸಿದ್ಧ. ಸರ್ಕಾರ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಮತದಾನವನ್ನೇ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.
ಮುಖಂಡರಾದ ಸೋಮನಾಯಕ, ಮಂಜುನಾಥ್, ವಸಂತ್ ಕುಮಾರ್, ರವಿ, ಸಾಯಿಬಾಬಾ ನಾಗರಾಜ, ದೊಡ್ಡದೇವಪ್ಪ, ಕೆಂಪರಾಜೇ ಅರಸು ಇದ್ದರು.