ಮನೆ ಮನರಂಜನೆ ‘ಅವತಾರ್: ಫೈರ್ ಆಂಡ್ ಆಶ್’ 2ನೇ ಟ್ರೈಲರ್ ಬಿಡುಗಡೆ

‘ಅವತಾರ್: ಫೈರ್ ಆಂಡ್ ಆಶ್’ 2ನೇ ಟ್ರೈಲರ್ ಬಿಡುಗಡೆ

0

‘ಅವತಾರ್’ ಸಿನಿಮಾ ಸರಣಿಯ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಇದೇ ಸಿನಿಮಾ ಸರಣಿಯ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೂರನೇ ಸರಣಿಗೆ ‘ಅವತಾರ್: ಫೈರ್ ಆಂಡ್ ಆಶ್’ ಎಂದು ಹೆಸರಿಡಲಾಗಿದೆ. ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸ್​​ನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತ್ತು. ಅದಾದ 13 ವರ್ಷಗಳ ಬಳಿಕ 2022 ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಹಿಟ್ ಆಯ್ತು. ಈಗ ಅದೇ ಸಿನಿಮಾ ಸರಣಿಯ ಮತ್ತೊಂದು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಸಿನಿಮಾದ 2ನೇ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

‘ಅವತಾರ್’ ಸಿನಿಮಾದ ಕತೆ ನಡೆಯುವುದು ಪ್ಯಾಂಡೋರಾ ಹೆಸರಿನ ಪ್ರದೇಶದಲ್ಲಿ. ಅಲ್ಲಿನ ವಾಸಿಸುವ ನೀಲಿ ಬಣ್ಣದ ನಾವಿ ಜನ, ಪ್ರಕೃತಿಯನ್ನು ದೇವರೆಂದು ಪೂಜಿಸುವವರು, ಆಧುನಿಕತೆಯಿಂದ ದೂರ ಪ್ರಕೃತಿಯ ನಡುವೆ ಅವರದ್ದೇ ಆಚರಣೆಗಳ ನಡುವೆ ಬದುಕುತ್ತಿರುವವರು. ಆದರೆ ಮನುಷ್ಯರು ತಮ್ಮ ಆಧುನಿಕ ಯಂತ್ರಗಳನ್ನು ಬಳಸಿ ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದಾಗ ನಾವಿ ಜನ ಮನುಷ್ಯರ ವಿರುದ್ಧ ಹೋರಾಟ ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಈ ವರೆಗಿನ ಎರಡು ಸಿನಿಮಾಗಳೂ ಇದೇ ಮಾದರಿಯ ಕತೆಯನ್ನು ಹೊಂದಿದ್ದವು. ಮೊದಲ ಸಿನಿಮಾನಲ್ಲಿ ಯುದ್ಧ ಅರಣ್ಯದಲ್ಲಿ ನಡೆದರೆ ಎರಡನೇ ಸಿನಿಮಾನಲ್ಲಿ ಯುದ್ಧ ನಡೆಯುವುದು ನೀರಿನಲ್ಲಿ. ಈಗ ಮೂರನೇ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಈ ವರೆಗೆ ಬಿಡುಗಡೆ ಆಗಿರುವ ಟ್ರೈಲರ್​​ನಿಂದ ತಿಳಿದು ಬರುತ್ತಿರುವುದೆಂದರೆ ಮೂರನೇ ಸಿನಿಮಾನಲ್ಲಿ ನಾವಿ ಜನಗಳ ನಡುವೆ ಅಂತರ್ಯುದ್ಧ ಶುರುವಾಗಿದೆ. ನಾವಿ ಜನರೇ ಪರಸ್ಪರರ ಮೇಲೆ ಕತ್ತಿ ಮಸೆದು ಯುದ್ಧಕ್ಕೆ ನಿಂತಿದ್ದಾರೆ. ನಾವಿ ಜನರ ಅಂತರ್ಯುದ್ಧದ ಲಾಭವನ್ನು ಮನಷ್ಯರು ಪಡೆಯುತ್ತಿದ್ದಾರೆ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಿಂದ ತಿಳಿದು ಬರುತ್ತಿರುವುದೆಂದರೆ ನಾವಿಯ ಒಂದು ಗುಂಪು ಬೆಂಕಿಯಿಂದಾಗಿ ತಮ್ಮ ಅರಣ್ಯವನ್ನು, ಮನೆಯನ್ನು ಕಳೆದುಕೊಂಡಿದೆ. ಆ ಜನ ಪ್ರಕೃತಿ ದೇವತೆ ಇವಾ ಮೇಲೆ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆ ಜನ ಈಗ ಇತರೆ ನಾವಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ಅವತಾರ್’ ಸಿನಿಮಾ ಸರಣಿಯ ನಾಯಕ ಜೆಕ್ ಸೂಲಿ ಹಾಗೂ ಅವನ ಗುಂಪಿಗೂ ಬೆಂಕಿಯಿಂದ ಬಾಧಿತರಾದ ನಾವಿಗಳ ಗುಂಪಿಗೂ ಜೋರು ಯುದ್ಧ ನಡೆದಿದೆ. ಬೆಂಕಿಯಿಂದ ಬಾಧಿತರಾದವರು ಮನುಷ್ಯರ ಜೊತೆಗೆ ಕೈ ಜೋಡಿಸಿದ್ದಾರೆ. ಭೀಕರ ಯುದ್ಧದಲ್ಲಿ ವಿಜಯ ಯಾರ ಪಾಲು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕಿದೆ.