ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ.
ಹಲವು ನಗರಗಳಲ್ಲಿ ಟಿಕೆಟ್ ದರ 2500–3000 ಆಗಿದ್ದರೂ ಜನ ಮುಗಿಬಿದ್ದು, ಚಿತ್ರ ನೋಡುತ್ತಿದ್ದಾರೆ.
ಕೆಜಿಎಫ್–2, ಆರ್’ಆರ್’ಆರ್, ಬ್ರಹ್ಮಾಸ್ತ್ರ ಮತ್ತು ಡಾಕ್ಟರ್ ಸ್ಟ್ರೇಂಜ್ ಚಿತ್ರಗಳು ಮಾತ್ರ ದೇಶದಲ್ಲಿ ಮೊದಲ ದಿನವೇ ಇದಕ್ಕಿಂತ ಹೆಚ್ಚಿನ ಗಳಿಕೆ ಕಂಡಿದ್ದವು.
ಸಿನಿಮಾ ವಹಿವಾಟು ವಿಶ್ಲೇಷಕರ ಪ್ರಕಾರ ಗುರುವಾರ ರಾತ್ರಿಯೇ 20 ಕೋಟಿ ಮುಂಗಡ ಬುಕ್ಕಿಂಗ್ ಆಗಿದೆ. ಕೆಜಿಎಫ್–2, ಮೊದಲ ದಿನವೇ ₹80 ಕೋಟಿ ಗಳಿಕೆ ಕಂಡಿತ್ತು. ಆದಾಗ್ಯೂ ಅವತಾರ್ ಚಿತ್ರದ ಟಿಕೆಟ್ ದರ ಅತ್ಯಂತ ದುಬಾರಿಯಾಗಿದೆ.
ಐಮ್ಯಾಕ್ಸ್ ಸ್ಕ್ರೀನ್’ಗಳಲ್ಲಿ 3ಡಿ ಚಿತ್ರದ ಟಿಕೆಟ್ ದರ 2500–3000 ಎಂದು ತೋರಿಸುತ್ತಿದೆ. ಈ ಗರಿಷ್ಠ ದರದಲ್ಲಿಯೂ ಚಿತ್ರ ಮೊದಲ ದಿನ ದಾಖಲೆ ಗಳಿಕೆ ಕಂಡಿದೆ.
ಚಿತ್ರದ ಅವಧಿ 3 ಗಂಟೆ 11 ನಿಮಿಷ. ಭಾರತದಲ್ಲಿ ಸುಮಾರು 3,000 ಸ್ಕ್ರೀನ್’ಗಳಲ್ಲಿ ಬಿಡುಗಡೆಯಾಗಿದೆ.
4ಡಿಎಕ್ಸ್’ಆರ್ 3ಡಿ ಶೋಗಳ ದರ ಮಲ್ಟಿಪೆಕ್ಸ್’ಗಳಲ್ಲಿ 2,500ರವರೆಗೆ ಇದೆ. 3ಡಿ ಶೋಗಳ ದರ ಕೂಡ 1500ರವರೆಗೆ ಇದೆ.
ಸಿನಿಮಾದ ಕಥೆ ಸುಮಾರಾಗಿದೆ. ಆದರೆ ತಾಂತ್ರಿಕವಾಗಿ ಸಿನಿಮಾ ಅತ್ಯುತ್ಕೃಷ್ಟವಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ನೀರಿನೊಳಗಿನ ಜಗತ್ತು, ವಿಎಫ್‌ಎಕ್ಸ್, 3ಡಿ ಎಫೆಕ್ಟ್‌ಗಳು ಅತ್ಯದ್ಬುತವಾಗಿವೆ. ಕ್ಲೈಮ್ಯಾಕ್ಸ್’ನ ಯುದ್ಧ ಎದ್ದು ನಿಂತು ಚಪ್ಪಾಳೆ ತಟ್ಟುವಂತಿದೆ. ಮೇಕಿಂಗ್, ಎಫೆಕ್ಟ್, ಕೊನೆಯ ಒಂದು ಗಂಟೆಯ ಆ್ಯಕ್ಷನ್ ಎಲ್ಲವೂ ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.