ಧಾರವಾಡ: ಒಳ್ಳೆ ಕೆಲಸಕ್ಕೆ ಪ್ರಶಸ್ತಿ, ತಪ್ಪು ಮಾಡಿದ್ರೆ ಅಮಾನತು ಜೊತೆಗೆ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೆಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಧಾರವಾಡ ಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆ ಮೂಲಕವೇ ಆಗಬೇಕು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ ಎಂದರು.
ಒಳ್ಳೆ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ. ಅವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ವಂಚನೆ ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡುತ್ತೇವೆ. ಅಷ್ಟೇ ಅಲ್ಲ, ಅದರ ಜೊತೆಗೆ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ. ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ. ಅದು ಕ್ರಿಮಿನಲ್ ಪ್ರಕರಣ ಸಹ ಆಗುತ್ತದೆ. ಈಗಾಗಲೇ ಇಬ್ಬರು ಎಸಿಗಳ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾ ಹೇಳುತ್ತಿದ್ದರು. ಈಗ ತಪ್ಪು ಮಾಡಿದ ಎಸಿಗಳ ಮೇಲೆಯೇ ಕ್ರಮ ತೆಗೆದುಕೊಂಡಿದ್ದೇವೆ. ಹಿಂದೆ ಹೇಗೆ ಕೆಲಸ ಮಾಡಿದ್ದೀರಿ ಎಂದು ನಾವು ಕೇಳುವುದಿಲ್ಲ. ಆದರೆ, ಈಗ ಜನ ಪರವಾಗಿ ಕೆಲಸ ಮಾಡಬೇಕು ಎಂದರು.