ಮೈಸೂರು(Mysore): ಏಡ್ಸ್ ರೋಗ ಮಾರಣಾಂತಿಕ ರೋಗವಾಗಿದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ ಎಂದು ಜಿಲ್ಲಾಧಿಕಾರಿಗಳಾದ ಡಾ ರಾಜೇಂದ್ರ ತಿಳಿಸಿದರು.
ನಗರದ ಜೆಎಸ್ ಎಸ್ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಮತ್ತು ರಾಜ್ಯ ಏಡ್ಸ್ ಪ್ರಿವೆಷನ್ ಸೊಸೈಟಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ಬಾಧಿತರನ್ನು ಕೇಳರಿಮೆಯಿಂದ ನೋಡದೇ ನೈತಿಕ ಸ್ಥೈರ್ಯ ತುಂಬಿ, ಆ ನೋವಿನಿಂದ ಹೊರತರಲು ಸಹಕರಿಸಬೇಕು ಎಂದು ಅವರು ತಿಳಿಸಿದರು.
ಎಚ್‌ಐವಿ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಜಿಲ್ಲೆಯಲ್ಲೂ ವ್ಯಾಪಕವಾಗಿ ಅರಿವು ಮೂಡಿಸಲು ಸೂಚಿಸಲಾಗಿದೆ. ರೋಗ ತಡೆಗೆ ಎಚ್ಚರಿಕೆಯೇ ಮದ್ದಾಗಿದೆ. ಆಸ್ಪತ್ರೆಗಳಲ್ಲಿ ಏಡ್ಸ್‌ರೋಗಿಗಳ ಬಗೆಗಿನ ಮಾಹಿತಿಗಳನ್ನು ಗೌಪ್ಯವಾಗಿಡುತ್ತಿದ್ದು ಬಾಧಿತರು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಕಾರಿ ಡಾ.ಎಚ್.ಕೆ.ಪ್ರಸಾದ್ ಮಾತನಾಡಿ, ‘‘ಮೈಸೂರು ಜಿಲ್ಲೆಯು ರಾಜ್ಯದ ಎಚ್‌ಐವಿ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ೮ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕು ಇಳಿಮುಖವಾಗುತ್ತಿದೆ. ಬೆಳಗಾವಿ, ಧಾರವಾಡ, ವಿಜಯಪುರ, ಚಿತ್ರದುರ್ಗ, ರಾಯಚೂರು, ಕಲಬುರಗಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳು ಮುಂಚೂಣಿಯಲ್ಲಿವೆ. ವಿಶ್ವದಲ್ಲಿ ೩೭ ಮಿಲಿಯನ್, ದೇಶದಲ್ಲಿ ೨೪ ಲಕ್ಷ, ರಾಜ್ಯದಲ್ಲಿ ೨.೧೬ ಲಕ್ಷ ಜನ ಎಚ್‌ಐವಿ ಭಾದಿತರಿದ್ದಾರೆ ಎಂದರು.
ಹೊಸ ಪ್ರಕರಣಗಳು ದಾಖಲಾಗದಂತೆ ತಡೆಯುವುದೇ ಈ ವರ್ಷದ ಘೋಷವಾಕ್ಯವಾಗಿದೆ. ಕಳೆದ ೨೦ ವರ್ಷಗಳಿಂದಲೂ ಸರಿಯಾಗಿ ಚಿಕಿತ್ಸೆ ಪಡೆಯುತ್ತಿರುವವರು ಇಂದಿಗೂ ಆರೋಗ್ಯವಾಗಿದ್ದಾರೆ. ಸಕಾಲದಲ್ಲಿ ವೈದ್ಯರ ಸಲಹೆಯಂತೆ ನಡೆದುಕೊಳ್ಳುವುದು ಮುಖ್ಯ. ಏಡ್ಸ್‌ಗೆ ಸಂಪೂರ್ಣ ಚಿಕಿತ್ಸೆ ಇಲ್ಲವೆಂಬುದನ್ನು ಎಲ್ಲರೂ ಅರಿಯಬೇಕು. ಸರಕಾರ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕೋವಿಡ್ ನಂತರ ಸಾರ್ವಜನಿಕರು ಎಲ್ಲ ಕಾಯಿಲೆಗಳನ್ನೂ ಮರೆತಂತೆ ಕಾಣುತ್ತಿದೆ ಎಂದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಪರೀಕ್ಷಾ ನಿಯಂತ್ರಕ ಡಾ.ಸುರೇಂಧ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಾ.ರಾಜೇಶ್ವರಿ, ಜೆಎಸ್‌ಎಸ್ ಎಎಚ್‌ಇಆರ್ ಡೀನ್ ಡಾ.ಕೆ.ಎ.ರವೀಶ, ಜೀವಧಾರ ರಕ್ತನಿ ಕೇಂದ್ರದ ನಿರ್ದೇಶಕ ಗಿರೀಶ್ ಇತರರು ಇದ್ದರು.
ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ
ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಮಿಲೇನಿಯಂ ವೃತ್ತ (ಎಲ್‌ಐಸಿ ವೃತ್ತ)ದಿಂದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನವರೆಗೆ ನಡೆದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಕಾರ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಚಾಲನೆ ನೀಡಿದರು.
ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಿದರು.














