ಮೈಸೂರು: ಮೇ.10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರು ಮತದಾನ ಮಾಡಿರಿ. ರಜೆ ದೊರೆತಿದೆ ಎಂದು ಬೇರೆಡೆಗೆ ತೆರಳದಿರಿ. ಪ್ರಜಾಪ್ರಭುತ್ವದ ಹಬ್ಬ ನಮ್ಮೆಲ್ಲರ ಹಬ್ಬವಾಗಿದ್ದು, ಈ ದಿನ ಯಾವುದೇ ರೀತಿಯ ಕಾರ್ಯಕ್ರಮವನ್ನಿಟ್ಟುಕೊಳ್ಳದೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಡಗರದಿಂದ ಮತದಾನ ಮಾಡಿರಿ ಎಂಬ ಸಂದೇಶ ಸಾರುವ ನೃತ್ಯ ಮತ್ತು ನಾಟಕಗಳನ್ನು ಮಾಡುವ ಮೂಲಕ ಎಲ್ಲರ ಮನಮುಟ್ಟುವಂತೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ತಾಲ್ಲೂಕು ಪಂಚಾಯತ್, ಹಾಗೂ ಗಾವಡಗೆರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹುಣಸೂರಿನ ಗಾವಡಗೆರೆ ಗ್ರಾಮ ಪಂಚಾಯಿತಿಯ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನರೇಗಾದಿಂದ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಆಟದ ಮೈದಾನ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಂದ ಮತದಾನ ಕುರಿತು ಜಾಗೃತಿ ಮೂಡಿಸುವ ನಾಟಕ ಮತ್ತು ನೃತ್ಯ ಪ್ರದರ್ಶನ ನೆರವೇರಿತು.
ಇದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಿಂದ, ಮುಖ್ಯರಸ್ತೆಯ ವೃತ್ತ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೂ ಸ್ವ -ಸಹಾಯ ಸಂಘದ ಮಹಿಳೆಯರು ಕಳಶವನ್ನು ಹಿಡಿದು, ಡೊಳ್ಳು ಕುಣಿತದೊಂದಿಗೆ ಮತದಾನದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಜೊತೆಗೆ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಗಾವಡಗೆರೆ ಮುಖ್ಯ ರಸ್ತೆಯಿಂದ ಹುಣಸೂರಿನವರೆಗೂ ಬೈಕ್ ಮೂಲಕ ಮತದಾನದ ಕುರಿತು ವಿವಿಧ ನಾಮಫಲಕಗಳನ್ನು ಹಿಡಿದು ಕಟ್ಟೆ ಮಳಲವಾಡಿ ಗ್ರಾಮ ಪಂಚಾಯಿತಿ ಮಾರ್ಗವಾಗಿ ಬೈಕ್ ಜಾಗೃತಿ ಜಾಥಾ ನಡೆಸಲಾಯಿತು.
ನರೇಗಾ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ, ಜಿಲ್ಲಾ ಪಂಚಾಯಿತಿ (ಅಭಿವೃದ್ಧಿ) ಉಪ ಕಾರ್ಯದರ್ಶಿ ಕೃಷ್ಣರಾಜು ಎಂ ಅವರು ಮಾತನಾಡಿ, ನಮ್ಮ ದೇಶದ ಸಂವಿಧಾನವು ನಮಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ದೊರಕಿಸಿಕೊಟ್ಟಿದ್ದು, ಪ್ರತಿಯೊಬ್ಬರೂ ತಪ್ಪದೇ ಮೇ.10ರಂದು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಇಂದಿಗೂ ಮತದಾನದ ಫಲಿತಾಂಶ ಶೇ.90ಕ್ಕೂ ಹೆಚ್ಚಿರುತ್ತದೆ. ಆದರೆ ಅತೀ ಹೆಚ್ಚಿನ ವಿದ್ಯಾವಂತರೇ ತುಂಬಿರುವ ನಗರ ಭಾಗಗಳಲ್ಲಿ ಮತದಾನದ ಫಲಿತಾಂಶ ಕೇವಲ 35 ರಷ್ಟಿರುವುದು ಬೇಸರದ ವಿಷಯ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸ್ವೀಪ್ ಸಮಿತಿ ಜಾರಿಗೊಂಡಿದ್ದು, ಎಲ್ಲೆಡೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಅಲ್ಲದೇ ಮತದಾನ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತ್ತು ಯಾವುದೇ ಪ್ರತಿಪಲಾಪೇಕ್ಷೆಯನ್ನು ಬಯಸದೇ ನೈತಿಕ ಮತದಾನ ಮಾಡುವ ಮೂಲಕ ಇತರರನ್ನು ಪ್ರೇರೇಪಿಸುವಂತೆ ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಬಿ.ಎಂ.ಸವಿತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಬಿ.ಕೆ.ಮನು, ನರೇಗಾ ಸಹಾಯಕ ನಿರ್ದೇಶಕರಾದ ಹೆಚ್.ಡಿ.ಲೋಕೇಶ್, ಎನ್.ಆರ್.ಎಲ್.ಎಂ ಟಿಪಿಎಂ ಮಂಜುಳಾ ನರಗುಂದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ಮಂಜುಳಾ ಮತ್ತು ಎಲ್ಲಾ ಪಂಚಾಯಿತಿ ಪಿಡಿೊಗಳು, ಐಇಸಿ ಸಂಯೋಜಕರು, ಸಂಜೀವಿನಿ ತಾಲ್ಲೂಕು ಸಿಬ್ಬಂದಿಗಳಾದ ಹೆಚ್.ಎನ್.ಪ್ರವೀಣ್, ಎಂ.ಎನ್.ಪ್ರವೀಣ್, ಫರ್ಹಾದ್ ಭಾನು ಹಾಗೂ ಸಂಜೀವಿನಿ ಜಿ.ಪಿ.ಎಲ್.ಎಫ್ ಪದಾಧಿಕಾರಿಗಳು, ಸದಸ್ಯರು, ಎಂಬಿಕೆಗಳು ಹಾಗೂ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.