ಕೊಚ್ಚಿ: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಸದ್ಯ ಚೊಚ್ಚಲ ನಿರ್ದೇಶನದ ಸಿನಿಮಾ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈ ನಡುವೆ ಮುಂದಿನ ಸಿನಿಮಾವನ್ನು ಯಾರ ಜತೆ ಮಾಡಲಿದ್ದಾರೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಮೋಹನ್ ಲಾಲ್ ಮೊದಲ ಬಾರಿಗೆ ನಟನೆ ಜತೆಗೆ ನಿರ್ದೇಶನದ ಹೊಣೆಯನ್ನು ಹೊತ್ತಿಕೊಂಡಿದ್ದಾರೆ. ʼಬರೋಜ್: ಗಾರ್ಡಿಯನ್ ಆಫ್ ಟ್ರೆಷರ್ʼ ಸಿನಿಮಾದ ಪ್ರಚಾರದಲ್ಲಿ ಮೋಹನ್ ಲಾಲ್ ಬ್ಯುಸಿಯಾಗಿದ್ದಾರೆ.
ಮಾಲಿವುಡ್‌ನಲ್ಲಿ ʼರೋಮಾಂಚಂʼ , ʼಆವೇಶಮ್ʼ ಸಿನಿಮಾಗಳನ್ನು ನೀಡಿ ಹಿಟ್ ನಿರ್ದೇಶಕರಾಗಿರುವ ಜಿತು ಮಾಧವನ್ ಅವರೊಂದಿಗೆ ಮೋಹನ್ ಲಾಲ್ ಸಿನಿಮಾವನ್ನು ಮಾಡಲಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲ ಸಮಯದಿಂದ ಹರಿದಾಡುತ್ತಿತ್ತು.
ಇದೀಗ ಈ ಬಗ್ಗೆ ಮೋಹನ್ ಲಾಲ್ ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ʼಬರೋಜ್ʼ ಪ್ರಚಾರದ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಅವರು, “ನಾನು ʼಆವೇಶಂʼ ಚಿತ್ರದ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದೇನೆ. ನಾನು ತುಂಬಾ ಕಥೆಗಳನ್ನು ಕೇಳುತ್ತಿದ್ದೇನೆ” ಎಂದಿದ್ದಾರೆ.
ತನಗೆ ʼತನ್ಮಾತ್ರʼ, ʼಪ್ರಣಾಯಂʼ ಮತ್ತು ʼಭ್ರಮರಂʼ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಬ್ಲೆಸ್ಸಿ ಬಗ್ಗೆ ಮಾತನಾಡಿದ ಅವರು, “ಬ್ಲೆಸ್ಸಿ ಅದ್ಭುತ ನಿರ್ದೇಶಕ. ಚೊಚ್ಚಲ ಯೋಜನೆಗಳಲ್ಲಿ ಹಲವಾರು ಪ್ರತಿಭಾವಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟವೆಂದು” ಹೇಳಿದ್ದಾರೆ.
ʼಸೌದಿ ವೆಲ್ಲಕ್ಕಾʼ , ʼಆಪರೇಷನ್ ಜಾವಾʼ ಸಿನಿಮಾವನ್ನು ಮಾಡಿರುವ ತರುಣ್ ಮೂರ್ತಿ ನಿರ್ದೇಶನದ ʼತುಡಾರಂʼ ಸಿನಿಮಾದಲ್ಲಿ ಸದ್ಯ ಮೋಹನ್ ಲಾಲ್ ಕೆಲಸ ಮಾಡುತ್ತಿದ್ದಾರೆ.
ʼಬರೋಜ್: ಗಾರ್ಡಿಯನ್ ಆಫ್ ಟ್ರೆಷರ್ʼ ಇದೇ ಡಿ.25 ರಂದು ತೆರೆ ಕಾಣಲಿದೆ.