ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಿಸಲಾಗುತ್ತಿದ್ದು, ಅಯೋಧ್ಯೆಯು ಆನಂದದ ಉತ್ತುಂಗದಲ್ಲಿ ತೇಲಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇಶ ಜನತೆಗೆ ರಾಮನವಮಿ ಶುಭಾಶಯ ತಿಳಿಸಿದ ಮೋದಿ, ಶ್ರೀರಾಮನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ. ಸದಾಚಾರ ಮತ್ತು ಶಾಂತಿಯ ಕಡೆಗೆ ಹೋಗಲು ಶ್ರೀರಾಮ ನಮಗೆ ಮಾರ್ಗದರ್ಶಿಯಾಗಲಿ ಎಂದರು.
ಶ್ರೀರಾಮನ ಜೀವನ ಮತ್ತು ಆದರ್ಶಗಳು ‘ವಿಕಸಿತ ಭಾರತ’ವನ್ನು ನಿರ್ಮಿಸುವ ನಮ್ಮ ಧ್ಯೇಯಕ್ಕೆ ಬಲವಾದ ಆಧಾರವಾಗಲಿದೆ ಎಂಬ ವಿಶ್ವಾಸ ನನಗಿದೆ. ರಾಮನ ಆಶೀರ್ವಾದವು ‘ಆತ್ಮನಿರ್ಭರ ಭಾರತ’ದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಮೋದಿ ಹೇಳಿದರು.
ಶ್ರೀರಾಮ ಇಡೀ ಮನುಕುಲಕ್ಕೆ ಸ್ಫೂರ್ತಿ: ದ್ರೌಪದಿ ಮುರ್ಮು
ನಿಸ್ವಾರ್ಥ ಪ್ರೀತಿ, ಶೌರ್ಯ ಮತ್ತು ಔದಾರ್ಯದ ಅತ್ಯುನ್ನತ ಆದರ್ಶಗಳನ್ನು ಹೊಂದಿದ್ದ ಶ್ರೀರಾಮ ಇಡೀ ಮನುಕುಲಕ್ಕೆ ಸ್ಫೂರ್ತಿ. ಈ ಶುಭ ದಿನದಂದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರು ಪ್ರತಿಜ್ಞೆ ಮಾಡೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.
ರಾಮನವಮಿ ಶುಭಾಶಯ ತಿಳಿಸಿರುವ ಮಲ್ಲಿಕಾರ್ಜುನ ಖರ್ಗೆ, ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂಯಮ, ತ್ಯಾಗ, ಘನತೆ, ಸತ್ಯತೆ, ಸೇವೆ ಮತ್ತು ಸಹಾನುಭೂತಿಯ ಮಹಾನ್ ಆದರ್ಶಗಳನ್ನು ಮೈಗೂಡಿಸಲಿ. ಎಲ್ಲರಿಗೂ ಸುಜ್ಞಾನ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದರು.