ನವದೆಹಲಿ: 70 ವರ್ಷ ಮೇಲ್ಪಟ್ಟವರಿಗೂ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ’ಯನ್ನು ಯಾವುದೇ ಆದಾಯದ ಮಿತಿಯಿಲ್ಲದೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿತು. ಇದರಿಂದಾಗಿ ದೇಶದ 6 ಕೋಟಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
5 ಲಕ್ಷ ರೂಪಾಯಿಯ ಉಚಿತ ವಿಮಾ ಯೋಜನೆಯ ವಿಸ್ತರಣೆ 4.5 ಕೋಟಿ ಹಿರಿಯ ನಾಗರಿಕರ ಕುಟುಂಬಗಳಿಗೆ ನೆರವಾಗಲಿದೆ. ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ವಿಭಿನ್ನ ಕಾರ್ಡ್ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
70 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ಕುಟುಂಬಗಳು ಈಗಾಗಲೇ ಈ ಯೋಜನೆಯ ಭಾಗವಾಗಿದ್ದರೂ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ವಿಮಾ ಯೋಜನೆಯನ್ನು ಟಾಪ್ ಅಪ್ ಮೂಲಕ ಪಡೆಯಲಿದ್ದಾರೆ. (ಇದನ್ನು ಅವರು ತಮ್ಮ 70 ವರ್ಷದೊಳಗಿನ ಇತರೆ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ). ಉಳಿದಂತೆ, ಎಲ್ಲ 70 ಮತ್ತು ಮೇಲ್ಪಟ್ಟ ಹಿರಿಯರು ಕುಟುಂಬದ ಆಧಾರದಲ್ಲಿ ಪ್ರತಿ ವರ್ಷ 5 ಲಕ್ಷ ರೂಪಾಯಿಯ ಉಚಿತ ವಿಮಾ ಯೋಜನೆಯ ಲಾಭ ಪಡೆಯಬಹುದು.
ಎಪ್ಪತ್ತು ವರ್ಷ ಮತ್ತು ಮೇಲ್ಪಟ್ಟವರು ಖಾಸಗಿ ಆರೋಗ್ಯ ವಿಮೆ ಮಾಡಿಸಿದ್ದರೆ ಅಥವಾ ESI ಯೋಜನೆಯ ಭಾಗವಾಗಿದ್ದರೂ ಕೂಡಾ ಆಯುಷ್ಮಾನ್ ವಿಮಾ ಯೋಜನೆಯ ಅನುಕೂಲಗಳನ್ನು ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೇ, ಸಾರ್ವಜನಿಕ ಆರೋಗ್ಯ ಯೋಜನೆಗಳಾದ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್‌ಎಸ್), ಮಾಜಿ ಸೈನಿಕರ ಆರೋಗ್ಯ ಯೋಜನೆ (ಇಸಿಹೆಚ್‌ಎಸ್) ಮತ್ತು ಆಯುಷ್ಮಾನ್ ಸಶಸ್ತ್ರ ಪೊಲೀಸ್ ದಳ (ಸಿಎಪಿಎಫ್)ದವರು ತಮ್ಮ ಹಾಲಿ ಯೋಜನೆಗಳನ್ನು ಮುಂದುವರೆಸಬಹುದು ಇಲ್ಲವೇ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯನ್ನು ಹೊಂದಬಹುದು. ಇಲ್ಲಿ ಸರ್ಕಾರ, ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಪ್ರತಿ ನಾಗರಿಕನಿಗೂ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ನಾವು ಬದ್ಧವಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯನ್ನು 70 ವರ್ಷ ಮೇಲ್ಪಟ್ಟವರಿಗೂ ಒದಗಿಸಲು ಕ್ರಮ ಕೈಗೊಂಡಿದೆ. ಈ ಯೋಜನೆಯು 6 ಕೋಟಿ ನಾಗರಿಕರಿಗೆ ಘನತೆ, ಕಾಳಜಿ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ’ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಕಾರ, ಎಬಿ ಪಿಎಂ-ಜೆಎವೈ ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಭರವಸೆ ಯೋಜನೆ. ಇದು ವಾರ್ಷಿಕ 5 ಲಕ್ಷ ರೂಪಾಯಿ ವೆಚ್ಚದಲ್ಲಿ 12.34 ಕೋಟಿ ಕುಟುಂಬಗಳ 55 ಕೋಟಿ ಜನರಿಗೆ ದ್ವಿತೀಯ ಮತ್ತು ತೃತೀಯ ಆಸ್ಪತ್ರೆ ಸೇವೆ ಒದಗಿಸುತ್ತದೆ. ಅರ್ಹ ಕುಟುಂಬದ ಪ್ರತಿ ಸದಸ್ಯ ಯಾವುದೇ ಪ್ರಾಯದ ನಿರ್ಬಂಧವಿಲ್ಲದೆ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ.
ಈ ಯೋಜನೆ 7.37 ಆಸ್ಪತ್ರೆ ದಾಖಲಾತಿಗಳನ್ನು ಹೊಂದಿದೆ. ಈ ಪೈಕಿ ಶೇ.49ರಷ್ಟು ಮಹಿಳಾ ಫಲಾನುಭವಿಗಳು ಎಂಬುದು ವಿಶೇಷ. ಈ ಯೋಜನೆಯಿಂದ 1 ಲಕ್ಷ ಕೋಟಿ ರೂಪಾಯಿ ಮೊತ್ತದಷ್ಟು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.