ಮನೆ ರಾಜ್ಯ ಸ್ವಾತಂತ್ರ್ಯದ ಅಮೃತ ಮಹೋತ್ಸವ: ಅರಮನೆ ಆವರಣದಲ್ಲಿ ಮೇಳೈಸಿದ ಸಾಂಸ್ಕೃತಿಕ ವೈಭವ

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಅರಮನೆ ಆವರಣದಲ್ಲಿ ಮೇಳೈಸಿದ ಸಾಂಸ್ಕೃತಿಕ ವೈಭವ

0

ಮೈಸೂರು(Mysuru): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ಮುಂಭಾಗ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಅರಮನೆ ಮಂಡಳಿ ವತಿಯಿಂದ 75ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಸಂಜೆ 7ರಿಂದ ಮಧ್ಯರಾತ್ರಿ 12ರ ವರೆಗೆ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ದೇಶ ಭಕ್ತಿ ಗೀತಗಾಯನ, ಸೈನಿಕ ಪರಾಕ್ರಮದ ನೃತ್ಯವೈಭವ, ಲೇಸರ್ ಶೋ ಚಮತ್ಕಾರ ಸಭಿಕರ ಕಣ್ಮನ ಸೆಳೆಯಿತು. ಈ ಕ್ಷಣಗಳನ್ನು ಪ್ರವಾಸಿಗರು, ಸಾರ್ವಜನಿಕರು ಕಣ್ತುಂಬಿಕೊಂಡರು.
ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಉದ್ಘಾಟಿಸಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರ ಎಸ್.ಎ.ರಾಮದಾಸ್ ಮಾತನಾಡಿದರು. ಮೇಯರ್ ಸುನಂದ ಪಾಲನೇತ್ರ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಆರ್.ರಘು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ, ತಹಸೀಲ್ದಾರ್ ಗಿರೀಶ್, ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ್, ಅಪ್ಪಣ್ಣ ಇನ್ನಿತರರು ಇದ್ದರು.
ಬಳಿಕ ಸಾಂಸ್ಕೃತಿಕ ಕಲೆಗಳು ಮೂಲಕ ದೇಶಭಕ್ತಿಯನ್ನು ಪ್ರಸ್ತುತ ಪಡಿಸಲಾಯಿತು. ಸ್ಥಳೀಯ ಕಲಾವಿದ, ಆಪ್ತಮಿತ್ರ ಖ್ಯಾತಿಯ ಶ್ರೀಧರ್ ಜೈನ್ ಮತ್ತು ತಂಡದಿಂದ ಸೈನಿಕ ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಟ್ಟಿತು. ೮೦ ಕಲಾವಿದರು ಯೋಧರ ಸಾಹಸ, ಸವಾಲು, ಜೀವದ ಕಷ್ಟ-ನಷ್ಟವನ್ನು ನೃತ್ಯರೂಪಕ ಮೂಲಕ ಸಭಿಕರ ಎದುರು ತೆರೆದಿಟ್ಟರು.
ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್, ಅಂಕಿತ ಕುಂಡು, ಶಶಿಕಲಾ ಸುನೀಲ್, ನಾಗಚಂದ್ರಿಕಾ ಭಟ್, ರವಿ ಮುರೂರು, ಚಿಂತನ ವಿಕಾಸ್ ಮತ್ತು ತಂಡದವರಿಂದ ವಂದೇ ಮಾತರಂ ಸಂಗೀತ ಕಾರ್ಯಕ್ರಮ ಜರುಗಿತು. ದೇಶಾಭಿಮಾನವನ್ನು ಸಾರುವ ಅನೇಕ ಗೀತೆಗಳನ್ನು ಸೊಗಸಾಗಿ ಹಾಡಿ ನೆರೆದವರನ್ನು ರಂಜಿಸಿದರು. ಮೈ ಲೇಸರ್ ವಿಷನ್ ಸಂಸ್ಥೆಯಿಂದ ಲೇಸರ್ ಷೋ ನಡೆಯಿತು. ಸ್ವಾತಂತ್ರೃ ಸಂಗ್ರಾಮದ ಚರಿತ್ರೆ, ಹೋರಾಟಗಾರರ ತ್ಯಾಗ ಬಲಿದಾನವನ್ನು ನವತಂತ್ರಜ್ಞಾನದ ಮೂಲಕ ವರ್ಣರಂಜಿತವಾಗಿ ತೆರೆದಿಡಲಾಯಿತು.

ಹಿಂದಿನ ಲೇಖನಕೇಂದ್ರ ಲೋಕಸೇವಾ ಆಯೋದಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಮುಂದಿನ ಲೇಖನಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ