ಮನೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ

0


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಪುತ್ರ, ಶಾಸಕ ಬಿ.ವೈ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು.


ಇಂದು ಬೆಂಗಳೂರಿನಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್​ ಕಟೀಲ್ ಅವರು ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷರ ಕೊಠಡಿಯಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಬಹುತೇಕ ನಾಯಕರ ಗೈರು ಎದ್ದು ಕಾಣುತ್ತಿತ್ತು.
ಸಿ.ಟಿ.ರವಿ, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಡಾ.ಕೆ.ಸುಧಾಕರ್​, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ ಸೇರಿದಂತೆ ಸಂತೋಷ್ ಬಣದ ನಾಯಕಕರು ವಿಜಯೇಂದ್ರ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇದರೊಂದಿಗೆ ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆರಂಭದಲ್ಲೇ ಬಂಡಾಯದ ಬಿಸಿ ತಟ್ಟಿದೆ.
ಅಧಿಕಾರ ಸ್ವೀಕಾರಕ್ಕೂ ಮೊದಲು ವಿಜಯೇಂದ್ರ ಇಂದು ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮ ಮತ್ತು ಗೌರಿ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಿದ್ದರು. ನಿನ್ನೆ ರಾತ್ರಿಯಿಂದ ಪುರೋಹಿತರಾದ ನಾಗೇಂದ್ರ ಭಾರದ್ವಾಜ್ ತಂಡದಿಂದ ಬಿಜೆಪಿ ಕಚೇರಿಯಲ್ಲಿ ನಡೆದ ವಾಸ್ತು ಪೂಜೆ, ಗಣ ಹೋಮ, ದುರ್ಗಾ ಹೋಮ, ಸುದರ್ಶನ ಹೋಮ ಮತ್ತು ತ್ರೈಲೋಕ್ಯ ಸುಂದರಿ ಹೋಮ ಮತ್ತು ಪೂಜಾ ಕಾರ್ಯಗಳು ನಡೆದಿದ್ದವು.

ಹಿಂದಿನ ಲೇಖನಜೆಡಿಎಸ್ ಪಕ್ಷದಿಂದ “ಎಸ್”(Secular) ತೆಗೆದುಹಾಕಬೇಕಾಗಿದೆ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನರಾಜ್ಯ ಮಟ್ಟದ ಅಭಿವೃದ್ಧಿ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು